ಶಿರ್ವ: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಟಿಯು ಮಂಗಳೂರು ವಿಭಾಗದ ಅಂತರ್‌ಕಾಲೇಜು ಮಹಿಳೆಯರ ಹಾಗೂ ಪುರುಷರ ಟೇಬಲ್ ಟೆನ್ನಿಸ್ ಪಂದ್ಯಾವಳಿ ಇತ್ತೀಚೆಗೆ ನಡೆಯಿತು.
ಸೋದೆ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರತ್ನ ಕುಮಾರ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಪ್ರತಿಯೊಬ್ಬರೂ ಯಾವುದಾದರೂ ಒಂದು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಒಟ್ಟು 14 ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ಮಂಗಳೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಪ್ರಥಮ ಸ್ಥಾನ ಪಡೆದರೆ, ಕೆನರಾ ಎಂಜಿನಿಯರಿಂಗ್ ಕಾಲೇಜು ದ್ವಿತೀಯ ಸ್ಥಾನ ಗಳಿಸಿತು.
ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡರೆ, ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ತಂಡ ದ್ವಿತೀಯ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಸೋದೆ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಧಾಕೃಷ್ಣ ಎಸ್. ಐತಾಳ್, ಸಂಸ್ಥೆಯ ಪ್ರಾಂಶುಪಾಲ ಡಾ. ನಾಗರಾಜ್ ಭಟ್, ಶೈಕ್ಷಣಿಕ ಡೀನ್ ಡಾ. ಸುದರ್ಶನ್ ರಾವ್, ದೈಹಿಕ ಶಿಕ್ಷಣ ನಿರ್ದೇಶಕ ಪೌಲ್ ಸೂರಜ್ ಹಾಗೂ ಸಹಾಯಕ ದೈಹಿಕ ಶಿಕ್ಷಕಿ ಶುಭಶ್ರೀ ಉಪಸ್ಥಿತರಿದ್ದರು.

