ಕಾರ್ಕಳ: ಜನಪ್ರತಿನಿಧಿಗಳು ಹಾಗೂ ಸರ್ಕಾರ ರೂಪಿಸುವ ಯೋಜನೆಗಳ ನಿಜವಾದ ಉದ್ದೇಶ ಜನಸಾಮಾನ್ಯರಿಗೆ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವ ಸಾರ್ಥಕವಾಗುತ್ತದೆ. ಈ ಹಿಂದೆ ನಡೆದ ಜನಸ್ಪಂದನೆ ಕಾರ್ಯಕ್ರಮದ ಮಾದರಿಯಲ್ಲೇ ‘ಪ್ರಜಾಸೇವಾ ಆಂದೋಲನ’ವನ್ನು ಆಯೋಜಿಸಲಾಗುತ್ತಿದ್ದು, ಗ್ರಾಮಸ್ಥರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಬೆಳ್ಮಣ್ ಶ್ರೀ ಕೃಷ್ಣ ಸಭಾಂಗಣದಲ್ಲಿ ಶನಿವಾರ ಪ್ರಜಾಸೇವಾ ಇಲಾಖೆ ಹಾಗೂ ಕಾರ್ಕಳ ತಾಲೂಕು ಆಡಳಿತದ ವತಿಯಿಂದ ನಡೆದ ಕಾರ್ಕಳ ಹೋಬಳಿ ಮಟ್ಟದ ‘ಪ್ರಜಾಸೇವಾ ಆಂದೋಲನ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದೇ ಸ್ಥಳದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸುವ ಅವಕಾಶವನ್ನು ಈ ಕಾರ್ಯಕ್ರಮ ಒದಗಿಸುತ್ತದೆ. ಈ ಮೂಲಕ ಸಾರ್ವಜನಿಕರಿಗೆ ಸಮಯ ಹಾಗೂ ಶ್ರಮ ಉಳಿತಾಯವಾಗಲಿದೆ ಎಂದರು.
ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಮಾತನಾಡಿ, ಹಲವು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ‘ಪ್ರಜಾಸೇವಾ ಆಂದೋಲನ’ ಸಹಕಾರಿಯಾಗಲಿದೆ. ಸಲ್ಲಿಕೆಯಾಗುವ ಅರ್ಜಿಗಳನ್ನು 15 ದಿನಗಳೊಳಗೆ ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರದ ಜನಪರ ಯೋಜನೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಉಪಸ್ಥಿತರಿದ್ದರು. ಪ್ರಭಾರ ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

