ಇನ್ನಾ ಗ್ರಾಮದ ಅನ್ನಾಜಿಗೋಳಿಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಗಣಪತಿ ಹೆಗ್ಡೆ ಅವರಿಗೆ ಸೇರಿದ ಜಾಗದಲ್ಲಿ ಟವರ್ ನಿರ್ಮಾಣಕ್ಕಾಗಿ ಜೆಸಿಬಿ ಮೂಲಕ ಹೊಂಡ ಅಗೆದು ಕಾಮಗಾರಿ ಆರಂಭಿಸಿತು. ಕಾಮಗಾರಿ ನಡೆಯುವ ಸ್ಥಳಕ್ಕೆ ಗ್ರಾಮಸ್ಥರು ಪ್ರವೇಶಿಸದಂತೆ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಕಾಮಗಾರಿ ನಡೆಯುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಇನ್ನಾ ಗ್ರಾಮಸ್ಥರು, ಜಾಗದ ಮಾಲೀಕರಾದ ಗಣಪತಿ ಹೆಗ್ಡೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದರು. ಯೋಜನೆಯ ವಿರೋಧಿ ಹೋರಾಟಗಾರರು ಕಾಮಗಾರಿ ನಡೆಯುವ ಸ್ಥಳಕ್ಕೆ ಬರಲು ಮುಂದಾದಾಗ ಅವರನ್ನು ಪೊಲೀಸರು ತಡೆದರು. ಬಳಿಕ ಸಾರ್ವಜನಿಕರು ಸೇರಿರುವ ಸ್ಥಳಕ್ಕೆ ಬಂದ ಅಧಿಕಾರಿಗಳು, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕಾಮಗಾರಿ ತಡೆಹಿಡಿಯುವಂತೆ ಸ್ಥಳೀಯ ಹೋರಾಟಗಾರರು ಮನವಿ ಮಾಡಿಕೊಂಡರು. ಅದರೆ ಇದಕ್ಕೊಪ್ಪದ ಅಧಿಕಾರಿಗಳು ಯಾವುದೇ ಕಾರಣಕ್ಕೆ ಕೆಲಸ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳನ್ನು ಹಾಗೂ ಸ್ಟರ್‌ಲೈಟ್ ಕಂಪೆನಿಯ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಮಧ್ಯೆ ಪ್ರವೇಶಿಸಿದ ಕಾರ್ಕಳ ಎಎಸ್‌ಪಿ ಹರ್ಷ ಪ್ರಿಯಂವದಾ
ಈ ಸಂದರ್ಭ ಸೇರಿದ್ದ ಸಾರ್ವಜನಿಕರನ್ನು ಭೇಟಿಯಾಗಿ ಸರ್ಕಾರದ ಆದೇಶದಂತೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಗುಂಪು ಸೇರುವಂತಿಲ್ಲ. ಗುಂಪು ಸೇರಿ ಪ್ರತಿಭಟನೆ ನಡೆಸುವುದಾದರೆ ಅನುಮತಿ ಬೇಕು. ಹೋರಾಟಗಾರರಿಗೆ ಕಾಮಗಾರಿಗೆ ಆಕ್ಷೇಪವಿದ್ದಲ್ಲಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿರಿ ಇಲ್ಲವೇ ನ್ಯಾಯಾಲಯದ ಮೆಟ್ಟಿಲೇರಿ ಕಾಮಗಾರಿಗೆ ತಡೆ ತಂದಲ್ಲಿ ಕಾಮಗಾರಿ ತಡೆ ಹಿಡಿಯುವುದಾಗಿ ಎಎಸ್‌ಪಿ ಹರ್ಷ ಪ್ರಿಯಂವದಾ ಹೇಳಿದರು.
ಮುಂದುವರಿದ ಕಾಮಗಾರಿ: ಹೋರಾಟ ಸಮಿತಿಯ ಪ್ರತಿನಿಧಿಗಳು ಹಾಗೂ ಸ್ಥಳೀಯರು ಸ್ಥಳದಿಂದ ತೆರಳಿದ ನಂತರ ಕಾಮಗಾರಿ ಮುಂದುವರಿಯಿತು. ಪೊಲೀಸ್ ಬಂದೋಬಸ್ತ್ ಮುಂದುಯವರಿದಿದೆ. ತಹಶೀಲ್ದಾರ್ ಎಸ್.ಎ. ಪ್ರಸಾದ್ ಸ್ಥಳದಲ್ಲಿದ್ದು, ಕಾಪು ಇನ್ಸ್ಪೆಕ್ಟರ್ ಜಯಶ್ರೀ ಮಾನೆ, ಪಡುಬಿದ್ರಿ ಎಸ್‌ಐ ಸಕ್ತಿವೇಲು ಬಂದೋಬಸ್ತ್ ಏರ್ಪಡಿಸಿದ್ದರು.
ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಹೊರಾಟ ಸಮಿತಿಯ ಪದಾಧಿಕಾರಿಗಳು ಟವರ್ ನಿರ್ಮಾಣಕ್ಕೆ ವಿರೋಧದ ಬಗ್ಗೆ, ನ್ಯಾಯಾಲಯದ ತಡೆಯ ಬಗ್ಗೆ ವಿವರಿಸಿದರು. ಆದರೆ ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶದಂತೆ ಕಾಮಗಾರಿ ಪೂರ್ಣಗೊಳಿಸುವುದರಿಂದ ಕಾಮಗಾರಿಗೆ ತಡೆಹಿಡಿಯಲು ನಿರಾಕರಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಹೋರಾಟಗಾರರ ಮಾತುಕತೆ ಯಾವುದೇ ಫಲನೀಡಲಿಲ್ಲ.
ನ್ಯಾಯಾಲಯದ ಮೆಟ್ಟಿಲೇರುತ್ತೇವೆ: ಚಂದ್ರಹಾಸ್ ಶೆಟ್ಟಿ ಕಾಚೂರು
ಖಾಸಗಿ ಜಾಗದ ಮಾಲೀಕರ ಅನುಮತಿ ಇಲ್ಲದೆ ನೋಟೀಸು ನೀಡದೆ ಏಕಾಎಕಿ ಪ್ರವೇಶಿಸಿ ಕಾಮಗಾರಿ ನಡೆಸುತ್ತಿವುದು ಸರಿಯಲ್ಲ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಈ ಯೋಜನೆಯಿಂದ ನೂರಾರು ಕೃಷಿ ಭೂಮಿ ನಾಶವಾಗಲಿದೆ. ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಡಳಿತ ಕಾಮಗಾರಿ ನಿಲ್ಲಿಸಬೇಕು. ಮುಂದೆ ಸಂಸದರು, ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು. ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಂದು ಯೋಜನೆಯ ವಿರೋಧ ಹೋರಾಟ ಸಮಿತಿಯ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಕಾಚೂರು ತಿಳಿಸಿದ್ದಾರೆ.


