ಉಡುಪಿ: ಇಲ್ಲಿನ ಅಜ್ಜರಕಾಡಿನಲ್ಲಿ ಜಿಲ್ಲಾಸ್ಪತ್ರೆಗೆಂದು ನೂತನವಾಗಿ ಕಟ್ಟಡವೊಂದನ್ನು ಕಟ್ಟಿ ಒಂದು ವರ್ಷ ಕಳೆದರೂ ಜನರ ಸೇವೆಗೆ ಬಿಟ್ಟು ಕೊಡದ ಹಿನ್ನೆಲೆ ಇಂದಿನಿಂದ 7 ದಿನಗಳ ಅಹೋರಾತ್ರಿ ಹೋರಾಟ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಅನ್ಸಾರ್ ಅಹಮದ್ (ಪ್ರವೀಣ್ ಶೆಟ್ಟಿ ಬಣ) ಹೇಳಿದ್ದಾರೆ.
ಸಪ್ಟೆಂಬರ್ 30 ರೊಳಗೆ ಆಸ್ಪತ್ರೆಗೆ ಬೇಕಾಗಿರುವ ಯಂತ್ರೋಪಕರಣ ವೈದ್ಯರು ಹಾಗೂ ದಾದಿಯರನ್ನು ವ್ಯವಸ್ಥೆಗೊಳಿಸಿ ಜಿಲ್ಲಾಸ್ಪತ್ರೆಯನ್ನು ಜನರ ಸೇವೆಗೆ ಬಿಟ್ಟು ಕೊಡಬೇಕೆಂದು ಆಗಸ್ಟ್ 24ರಂದು ಸಂಘಟನೆಯ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೇಡಿಕೆಯನ್ನು ಇಡಲಾಗಿತ್ತು, ಅಲ್ಲದೆ ಇದಕ್ಕೆ ತಪ್ಪಿದಲ್ಲಿ ಅಕ್ಟೋಬರ್ ಒಂದರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಬಗ್ಗೆಯೂ ತಿಳಿಸಲಾಗಿತ್ತು.
ಸೆಪ್ಟೆಂಬರ್ 30 ರ ವರೆಗೆ ಆಸ್ಪತ್ರೆ ಕಾರ್ಯಚರಿಸುವ ಬಗ್ಗೆ ಯಾವುದೇ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಅಹೋ ರಾತ್ರಿ ಹೋರಾಟ ಕೈಗೊಳ್ಳುವುದಾಗಿ ನಿರ್ಣಯಿಸಲಾಗಿದೆ ಎಂದರು.
ಬಳಿಕ ಮಾತು ಮುಂದುವರಿಸಿದ ಅವರು, ಒಂದು ವಾರದೊಳಗೆ ಸರಕಾರ ಯಾ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಸಕಾರಾತ್ಮಕವಾಗಿ ಸ್ಪಂದನೆ ಬರದೇ ಇದ್ದ ಪಕ್ಷದಲ್ಲಿ ಇದೇ ಹೋರಾಟವನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸುವ ಬಗ್ಗೆ ಯಾ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಹೋರಾಟ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ

