ಕಾಪು, ಜೂ. 23 : ಜನಸಂಘದ ಸ್ಥಾಪಕರಾದ ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಭಾರತದ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸಿದ ಧೀಮಂತ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದಿರುವ ಬಿಜೆಪಿ ಜಗತ್ತಿನಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದ ಬೆಳವಣಿಗೆಗೆ ಪ್ರಮುಖ ಪ್ರೇರಣಾ ಶಕ್ತಿಯಾಗಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಳತ್ತೂರು ಗುರ್ಮೆಯಲ್ಲಿ ದಿ. ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಆರ್ಟಿಕಲ್ ೩೭೦ ಅನ್ನು ವಿರೋಧಿಸಿ ಅಂದಿನ ಪ್ರಧಾನಿ ಜವಹಾರಲಾಲ್ ನೆಹರೂ ಸಂಪುಟದಿಂದ ಹೊರಬಂದು ಪ್ರತಿಭಟಿಸಿದ ಮುಖರ್ಜಿ ಅವರು ನಮಗೆಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಅಂದು ಅವರು ವ್ಯಕ್ತಪಡಿಸಿದ್ದ ಅಖಂಡ ಭಾರತದ ಸಂಕಲ್ಪ ಇಂದು ಸಾಕಾರಗೊಳ್ಳುತ್ತಿದೆ ಎಂದರು.
ಕಾಪು ಮಂಡಲ ಬಿಜೆಪಿ ಉಪಾಧ್ಯಕ್ಷೆ ಲತಾ ಆಚಾರ್ಯ, ಕುತ್ಯಾರು ಶಕ್ತಿ ಕೇಂದ್ರದ ಸಂಚಾಲಕ ಗಣೇಶ್ ಶೆಟ್ಟಿ ಪೆಯಾರು, ಕುತ್ಯಾರು ಗ್ರಾ. ಪಂ. ಸದಸ್ಯರಾದ ಆ್ಯಗ್ನೇಸ್ ಮಥಾಯಸ್, ಕಾಪು ಮಂಡಲ ಮಾಜಿ ಅಧ್ಯಕ್ಷ ವಿಜಯ್ ಕರ್ಕೇರ, ಬಿಜೆಪಿ ಮುಖಂಡೆ ಶುಭ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಹಿತಿ ಕಣಜ : ಡಾ. ಶ್ಯಾಮ ಪ್ರಸಾದ್ ಮುಖರ್ಜಿ
ಡಾ. ಶ್ಯಾಮ ಪ್ರಸಾದ್ ಮುಖರ್ಜಿ (1901–1953) ಒಬ್ಬ ಪ್ರಬಲ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣ ತಜ್ಞ. ಅವರು ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಬಳಿಕದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಅವರು ಬಳಿಕ ಸ್ವತಂತ್ರ ಭಾರತದ ಮೊದಲ ಸಂಪುಟದಲ್ಲಿ ಕೈಗಾರಿಕೆ ಮತ್ತು ಪೂರೈಕೆ ಸಚಿವರಾದರು. ಬಲವಾದ ರಾಷ್ಟ್ರೀಯತಾವಾದಿಯಾಗಿದ್ದ ಅವರು, 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಸಂಪುಟಕ್ಕೆ ರಾಜೀನಾಮೆ ನೀಡಿದರು. 1951 ರಲ್ಲಿ, ಅವರು ಇಂದಿನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೈದ್ಧಾಂತಿಕ ಪೂರ್ವವರ್ತಿಯಾದ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ರಾಷ್ಟ್ರೀಯ ಏಕೀಕರಣಕ್ಕಾಗಿ ಧ್ವನಿ ಎತ್ತುವ ಪ್ರತಿಪಾದಕರಾಗಿದ್ದರು ಮತ್ತು ರಾಜ್ಯದ ಸ್ವಾಯತ್ತತೆ ನಿಬಂಧನೆಗಳ ವಿರುದ್ಧ ಪ್ರತಿಭಟಿಸುವಾಗ ಕಾಶ್ಮೀರದಲ್ಲಿ ವಿವಾದಾತ್ಮಕ ಸಂದರ್ಭಗಳಲ್ಲಿ ನಿಧನರಾದರು. ಅವರ ರಾಜಕೀಯ ಜೀವನದುದ್ದಕ್ಕೂ, ಅವರು ರಾಷ್ಟ್ರೀಯ ಏಕತೆ, ಸಾಂಸ್ಕೃತಿಕ ಗುರುತು ಮತ್ತು ತುಷ್ಟೀಕರಣ ರಾಜಕೀಯಕ್ಕೆ ವಿರೋಧದ ಬಗ್ಗೆ ತಮ್ಮ ಬಲವಾದ ನಿಲುವಿಗೆ ಹೆಸರುವಾಸಿಯಾಗಿದ್ದರು. ಅವರ ರಾಜಕೀಯ ಪರಂಪರೆ ಭಾರತೀಯ ರಾಜಕೀಯದ ಮೇಲೆ ಇಂದಿಗೂ ಪ್ರಬಲ ಪ್ರಭಾವ ಬೀರುತ್ತಿದೆ, ವಿಶೇಷವಾಗಿ ಇಂದಿನ ಬಿಜೆಪಿಯ ಸಿದ್ಧಾಂತ ಮತ್ತು ಬೆಳವಣಿಗೆಗಳು ಅವರು ಸ್ಥಾಪಿಸಿದ ಜನಸಂಘದ ಸಿಧ್ದಹಂತಗಲಿಂದ ಬಹಳಷ್ಟು ಪ್ರಭಾವಿತವಾಗಿದೆ.



