ಪೊಲೀಸ್ ನೋಟಿಸ್ ನನ್ನ ಕೂದಲಿಗೆ ಸಮ: ಕಲ್ಲಡ್ಕ ಪ್ರಭಾಕರ ಭಟ್

Mohammed Shafi Ibrahim

ಬಂಟ್ವಾಳ: ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೀಡಿರುವ ನೋಟಿಸ್ ಕುರಿತು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬಿಸಿ ರೋಡ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

“ಪೊಲೀಸ್ ನೋಟಿಸ್ ನನ್ನ ಕೂದಲಿಗೆ ಸಮ. ನನ್ನ ಮೇಲೆ ಈಗಾಗಲೇ 110 ಕೇಸ್‌ಗಳಿವೆ. ಇದ್ಯಾವ ಲೆಕ್ಕ?” ಎಂದು ಅವರು ನೋಟಿಸ್‌ನ್ನು ಲಘುವಾಗಿ ಪರಿಗಣಿಸುವ ರೀತಿಯಲ್ಲಿ ಪ್ರತಿಕ್ರಿಯಿಸಿದರು.

ತಾವು ಫೋನ್ ಮೂಲಕ ಮಾತನಾಡಿರುವುದು ನಿಜ. ಆದರೆ ಸಂವಿಧಾನ ನೀಡಿರುವ ಸ್ವಾತಂತ್ರ್ಯದ ಅಡಿಯಲ್ಲಿ ಮಾತನಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. “ನಾನು ಫೋನ್ ಮಾಡಿ ಮಾತನಾಡಿದ್ದು ಹೌದು. ಆದರೆ ನಾನೇನು ಕೊಲೆ ಮಾಡಿ ಎಂದು ಮಾತನಾಡಿದ್ದೇನಾ? ನಾನು ಮಾತನಾಡಿರುವ ರೆಕಾರ್ಡ್ ಅವರಲ್ಲೇ ಇದೆ. ಅದರಲ್ಲಿ ಏನಿದೆ ಎಂಬುದು ಅವರಿಗೆ ಗೊತ್ತಿಲ್ಲವೇ?” ಎಂದು ಪ್ರಶ್ನಿಸಿದರು.

ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೀಡಿರುವ ನೋಟಿಸ್‌ಗೂ ಆಕ್ಷೇಪ ವ್ಯಕ್ತಪಡಿಸಿದ ಅವರು, “ನಾನು ಯಾಕೆ ವಿಚಾರಣೆಗೆ ಹಾಜರಾಗಬೇಕು? ನನಗೆ ಸಮಯ ಕೊಡಲು ಅವರ್ಯಾರು?” ಎಂದು ಪ್ರಶ್ನಿಸಿದರು.

ಅಬ್ದುಲ್ ರೆಹಮಾನ್ ಹತ್ಯೆಯನ್ನು ತಾವು ಯಾವುದೇ ರೀತಿಯಲ್ಲೂ ಸಮರ್ಥಿಸುವುದಿಲ್ಲ ಎಂದು ಹೇಳಿದ ಪ್ರಭಾಕರ ಭಟ್, “ನಾವ್ಯಾರೂ ಆ ಹತ್ಯೆಯನ್ನು ಪ್ರತಿಪಾದನೆ ಮಾಡಲ್ಲ. ಆದರೆ ಅದರಲ್ಲಿ ಇಲ್ಲದವರ ಮೇಲೂ ಕೇಸ್ ಹಾಕಿದ್ದಾರೆ” ಎಂದು ಆರೋಪಿಸಿದರು.

ಪೊಲೀಸರು ಕಾನೂನು ಪ್ರಕ್ರಿಯೆಯಂತೆ ನಡೆದುಕೊಳ್ಳಬೇಕು. ಗೃಹ ಸಚಿವರು ಅಥವಾ ಮುಖ್ಯಮಂತ್ರಿ ಹೇಳುತ್ತಾರೆ ಎಂಬ ಕಾರಣಕ್ಕೆ ಕಾನೂನನ್ನು ಬದಿಗೊತ್ತಿ ದಮನಿಸುವ ಕ್ರಮ ಕೈಗೊಳ್ಳಬಾರದು ಎಂದು ಅವರು ಹೇಳಿದರು. “ಕಾನೂನು ಬಿಟ್ಟು ಗೃಹಮಂತ್ರಿ, ಮುಖ್ಯಮಂತ್ರಿ ಹೇಳುತ್ತಾರೆ ಅಂತ ನಮ್ಮ ದಮನ ಬೇಡ. ಇವರ ಅಧಿಕಪ್ರಸಂಗ. ಅವರ ಚೇಲಾಗಳಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ ಎಂದು ಹೇಳಿದ ಅವರು, “ನನ್ನ ಮೇಲೆ 110 ಕೇಸ್ ಇದೆ. ಇದು ಒಂದು ಕೂದಲಿನ ಹಾಗೆ” ಎಂದು ನೋಟಿಸ್ ಕುರಿತು ಪ್ರತಿಕ್ರಿಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *