ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯ ಸಿಎಸ್ಆರ್ ಅಂಗವಾದ ಅದಾನಿ ಫೌಂಡೇಶನ್ ವತಿಯಿಂದ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಮೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಲಾಯಿತು.
ಅದಾನಿ ಫೌಂಡೇಶನ್ನ ವಾರ್ಷಿಕ ಸಿಎಸ್ಆರ್ ಕಾರ್ಯಕ್ರಮದಡಿ ನಡೆಯುತ್ತಿರುವ ಈ ಕಾಮಗಾರಿಗಳಲ್ಲಿ ಪಣಿಯೂರು-ಭಾಸ್ಕರ ಅಮೀನ್ ರಸ್ತೆ ಕಾಂಕ್ರೀಟೀಕರಣ, ವಾಜಪೇಯಿ ಬಡಾವಣೆಯ ರಸ್ತೆ ಕಾಂಕ್ರೀಟೀಕರಣ ಹಾಗೂ ಮಿಲಿಟರಿ ಕಾಲೋನಿ ರಸ್ತೆಯ ಕಾಂಕ್ರೀಟೀಕರಣ ಸೇರಿವೆ.
ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಬೆಳಪು ದಕ್ಷಿಣ ಏಷ್ಯಾದಲ್ಲೇ ಮಾದರಿ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕಾಪು ತಾಲೂಕಿನ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ. ಗ್ರಾಮದಲ್ಲಿ ಹಲವು ಎಂಎಸ್ಎಂಇ ಘಟಕಗಳು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಬೆಳಪು ಅಭಿವೃದ್ಧಿಯ ಹೊಸ ಹಂತದತ್ತ ಸಾಗುತ್ತಿದೆ ಎಂದು ಹೇಳಿದರು.
ಅದಾನಿ ಪವರ್ ಲಿಮಿಟೆಡ್ ಬೆಳಪು ಗ್ರಾಮ ಪಂಚಾಯತ್ ಅನ್ನು ತನ್ನ ಸಿಎಸ್ಆರ್ ವ್ಯಾಪ್ತಿಗೆ ಒಳಪಡಿಸಿಕೊಂಡು ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಸಮುದಾಯ ಮೂಲಸೌಕರ್ಯ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ. ಗ್ರಾಮ ಪಂಚಾಯತ್ ವತಿಯಿಂದ ಸಲ್ಲಿಸಲಾಗುವ ಕ್ರಿಯಾ ಯೋಜನೆಗಳನ್ನು ಅದಾನಿ ಫೌಂಡೇಶನ್ನ ಸಿಎಸ್ಆರ್ ಅನುದಾನದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.
ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅದಾನಿ ಪವರ್ ಲಿಮಿಟೆಡ್ ಒಟ್ಟು ₹3 ಕೋಟಿ ಸಿಎಸ್ಆರ್ ಅನುದಾನ ಘೋಷಿಸಿದೆ. ಈವರೆಗೆ ಸುಮಾರು ₹3.06 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.
ಅದಾನಿ ಫೌಂಡೇಶನ್ ಶಿಕ್ಷಣ, ಆರೋಗ್ಯ, ಗ್ರಾಮೀಣ ಕ್ರೀಡೆ ಮತ್ತು ಕಲೆಗಳ ಉತ್ತೇಜನ, ಸಾಮಾಜಿಕ ಅರಣ್ಯೀಕರಣ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಿಎಸ್ಆರ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಬೆಳಪು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಅದಾನಿ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಬೆಳಪು ಗ್ರಾಮ ಪಂಚಾಯತ್ನೊಂದಿಗೆ ಉತ್ತಮ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಗ್ರಾಮಸ್ಥರ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಹಲವು ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವುದು ಗಮನಾರ್ಹ ಎಂದರು.
ಗ್ರಾಮ ಪಂಚಾಯತ್ನ ಆದ್ಯತೆಗಳು ಹಾಗೂ ಸ್ಥಳೀಯ ಅಗತ್ಯಗಳನ್ನು ಪರಿಗಣಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ಶ್ಲಾಘನೀಯ. ಅದಾನಿ ಫೌಂಡೇಶನ್ನ ಸಿಎಸ್ಆರ್ ಚಟುವಟಿಕೆಗಳಿಂದ ಗ್ರಾಮದಲ್ಲಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಕ್ರೀಡೆ, ಕಲೆ ಹಾಗೂ ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಯೋಜನಗಳು ದೊರಕಿವೆ ಎಂದು ಅವರು ತಿಳಿಸಿದರು.

