ರಾಜ್ಯ ಸರಕಾರದ ವಿರುದ್ಧದ ಬಿಜೆಪಿ ಧರಣಿ ಸತ್ಯಾಗ್ರಹ ಅರ್ಥಹೀನವಾದುದ್ದು: ವಿನಯ್ ಕುಮಾರ್ ಸೊರಕೆ ಲೇವಡಿ

ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ, ಧರಣಿ ಸತ್ಯಾಗ್ರಹ ಅರ್ಥಹೀನವಾಗಿದೆ. ಸೋಮವಾರ ನಡೆಸಿದ ಪ್ರತಿಭಟನೆಯ ಉದ್ದೇಶವೇ ಏನೆಂದು ಜನರಿಗೆ ಅರ್ಥವಾಗಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮದೇ ಆಡಳಿತದ ವಿರುದ್ಧ ತಾವೇ ಪ್ರತಿಭಟನೆ ನಡೆಸಿದ್ದು ಇದರಿಂದಾಗಿ ಬಿಜೆಪಿಗರು ಸ್ವತಃ ನಗೆಪಾಟಲಿಗೀಡಾಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಲೇವಡಿ ಮಾಡಿದ್ದಾರೆ

admin

ಕಾಪು, ಜೂ. 24: ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಂಚಣಿ ರದ್ಧು, 9-11 ಸಮಸ್ಯೆಗಳು ಬಿಜೆಪಿ ಸರಕಾರದ ಕೊಡುಗೆಯಾಗಿದೆ. ವಿದ್ಯುತ್ ದರ ಏರಿಕೆ ವಿಚಾರದಲ್ಲಿ ಸರಕಾರದ ಪಾತ್ರವಿರುವುದಿಲ್ಲ ಎನ್ನುವುದನ್ನು ಹಿಂದಿನ ಬಿಜೆಪಿ ಸರಕಾರದ ಆಡಳಿತದ ವೇಳೆ ಅಂದಿನ ಸಚಿವ ಸುನೀಲ್ ಕುಮಾರ್ ಸ್ವತಃ ತಿಳಿಸಿದ್ದರು. ಹೀಗಿರುವಾಗ ಪ್ರತಿಪಕ್ಷ ಬಿಜೆಪಿ ಹೀಗೆ ಪ್ರತಿಭಟನೆ ನಡೆಸುವ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದರು.

ಕಾಪು ಕ್ಷೇತ್ರಕ್ಕೆ ಗ್ಯಾರಂಟಿ ಯೋಜನೆ ಮೂಲಕ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದೆ. ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ಬಹುತೇಕ ಬಿಜೆಪಿಗರು ಗ್ಯಾರಂಟಿ ಸ್ಕೀಂನ ಫಲಾನುಭವಿಗಳೇ ಆಗಿದ್ದಾರೆ. ಬಿಜೆಪಿ ಜನಪ್ರತಿನಿಽಗಳು ಬೀದಿ ನಾಟಕ ನಡೆಸುವುದನ್ನು ಬಿಟ್ಟು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಿ. ಗ್ರಾಮ ಪಂಚಾಯತ್‌ಗಳ ಮುಂದೆ ಪ್ರತಿಭಟನೆ ಮಾಡುವುದರ ಬದಲಿಗೆ ಪ್ರತೀ ಗ್ರಾಮ ಪಂಚಾಯತ್‌ನಲಿ ಬಿದ್ದಿರುವ ಮನೆ ನಿವೇಶನ, ಹಕ್ಕು ಪತ್ರ ಕುರಿತಾದÀ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಿ ಎಂದು ಆಗ್ರಹಿಸಿದರು.

ಸರಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿಲ್ಲ:

ರಾಜ್ಯ ಸರಕಾರ ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡಿಲ್ಲ. ಕೋಮು ದ್ವೇಷ ಭಾಷಣ, ಕೃತ್ಯಕ್ಕೆ ಬೆಂಬಲ, ಸಹಕಾರ ನೀಡುವ ಮತ್ತು ಪಾಲ್ಗೊಳ್ಳುತ್ತಿರುವವರ ಬಗ್ಗೆ ಮಾತ್ರ ಕ್ರಮ ಜಾರಿಯಾಗಿದೆ. ಅದನ್ನು ಸರಕಾರ ಮಾಡಿರುವುದಲ್ಲ. ಪೊಲೀಸರೇ ಪಟ್ಟಿ ಸಿದ್ಧ ಮಾಡಿ ಅವರ ವಿರುದ್ಧ ಕ್ರಮ ಜಾರಿ ಮಾಡಿದ್ದಾರೆ. ಪಟ್ಟಿಯಲ್ಲಿ ಹಿಂದೂಗಳು, ಮುಸಲ್ಮಾನರೂ ಇದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರಕಾರವನ್ನು ಟಾರ್ಗೆಟ್ ಮಾಡುವ ಕೆಲಸ ಬಿಜೆಪಿ ಮತ್ತು ಸಂಘ ಪರಿವಾರದಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಶಾಸಕರ ಅಸಮಾಧಾನ ಪಕ್ಷದ ಆಂತರಿಕ ವಿಚಾರ:

ರಾಜ್ಯ ಸರಕಾರದ ಬಗ್ಗೆ ಕಾಂಗ್ರೆಸ್ ಶಾಸಕರ ಹೇಳಿಕೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಪಕ್ಷದೊಳಗಿನ ಆಂತರಿಕ ವಿಚಾರವಾಗಿದೆ. ಅವರವರ ಜಿಲ್ಲೆ, ಕ್ಷೇತ್ರಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರಕಾರದ ಮುಂದೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಅವರ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಪ್ರತಿಕ್ರಯಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ಶಾಂತಲತಾ ಶೆಟ್ಟಿ, ಮಹಮ್ಮದ್ ನಿಯಾಜ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *