ಮಂಗಳೂರು: ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಉದ್ದೇಶದಿಂದ ಆರಂಭಿಸಲಾಗಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. 2023ರಿಂದ ದೇಶದ ಚುನಾವಣಾ ಆಯೋಗ ಕೈಗೊಂಡಿರುವ ಎಲ್ಲಾ ಪ್ರಕ್ರಿಯೆಗಳ ಕುರಿತು ಸುಪ್ರೀಂ ಕೋರ್ಟ್ ಸಮಗ್ರ ತನಿಖೆ ನಡೆಸಬೇಕು ಎಂದು ನಟ ಪ್ರಕಾಶ್ ರಾಜ್ ಆಗ್ರಹಿಸಿದರು.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಅರ್ಹ ಮತದಾರರನ್ನು ಸೇರ್ಪಡೆಗೊಳಿಸುವ ಮೂಲಕ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಿ ಹೊಸದಾಗಿ ರಚಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸುಮಾರು 13 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದ ಅವರು, ಈ ಪೈಕಿ ನುಸುಳುಕೋರರು ಎಷ್ಟು ಮಂದಿ ಎಂಬುದರ ಪಟ್ಟಿಯನ್ನು ಈವರೆಗೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಆರೋಪಿಸಿದ ಪ್ರಕಾಶ್ ರಾಜ್, ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ದೇಶದ ಚುನಾವಣಾ ಆಯೋಗದಲ್ಲಿ ಸಮಾನ ಅಧಿಕಾರ ಹೊಂದಿರುವ ಮೂವರು ಚುನಾವಣಾ ಆಯುಕ್ತರ ನೇಮಕವಾಗಿದ್ದರೂ, ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡುವಲ್ಲಿ ಆಳುವ ಪಕ್ಷದ ಪ್ರಮುಖ ಪಾತ್ರವಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು. ಚುನಾವಣಾ ಆಯುಕ್ತರ ವಿರುದ್ಧ ಪ್ರಕರಣ ದಾಖಲಿಸುವುದನ್ನು ತಡೆಯುವ ಉದ್ದೇಶದಿಂದ 2023ರಲ್ಲಿ ಶಾಸನದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಅವರು ದೂರಿದರು.
ಇಬ್ಬರು ಚುನಾವಣಾ ಆಯುಕ್ತರು ಎಸ್‌ಐಆರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳ ಕುರಿತು ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದ ಅವರು, ಈ ಹಿನ್ನೆಲೆಯಲ್ಲಿ 2023ರ ನಂತರ ಚುನಾವಣಾ ಆಯೋಗದ ನಡೆಗಳ ಬಗ್ಗೆ ದೇಶದ ಜನರಲ್ಲಿ ಸಂಶಯ ಮೂಡುವಂತಾಗಿದೆ ಎಂದರು.

