ವಿಶೇಷ ವರದಿ, ನ್ಯೂಸ್ ಭಾರತ್ ಕನ್ನಡ
ಅರಬ್ಬಿ ಸಮುದ್ರದ ತೀರವನ್ನಾಳುವ ದಕ್ಷಿಣ ಭಾರತದ ರಾಜ್ಯಗಳು — ಕೇರಳ, ಕರ್ನಾಟಕ ಮತ್ತು ಗೋವಾ — ಇಂದು ವೇಗವಾಗಿ ಬದಲಾಗುತ್ತಿದ್ದು, ಬೀಚ್ ಡೆವಲಪ್ಮೆಂಟ್ ಅನ್ನೂ ಪೀಡೆಯ ಒತ್ತಡದಲ್ಲಿವೆ. ಪ್ರವಾಸೋದ್ಯಮ, ರಸ್ತೆ ಅಗಲೀಕರಣ, ಬೀಚ್ ರಿಸಾರ್ಟ್ಗಳು, ಸಮುದ್ರತೀರ ಅಭಿವೃದ್ಧಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಯೋಜನೆಗಳು ಒಂದು ಕಡೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತಿದ್ದರೆ, ಮತ್ತೊಂದು ಕಡೆ ಪರಿಸರ, ಮೀನುಗಾರಿಕೆ ಮತ್ತು ಕರಾವಳಿ ಸಮುದಾಯಗಳ ಬದುಕಿಗೆ ಗಂಭೀರ ಸವಾಲುಗಳನ್ನು ಎಸೆಯುತ್ತಿದೆ.
ಕರಾವಳಿಯಲ್ಲಿ ಏನಾಗುತ್ತಿದೆ?
ಕಡಲತೀರ ಪ್ರದೇಶಗಳಲ್ಲಿ ಬೀಚ್ ರಸ್ತೆಗಳು, ವಾಣಿಜ್ಯ ಸಂಕೀರ್ಣಗಳು, ಪ್ರವಾಸಿ ತಾಣಗಳು, ಕಲ್ಲಿನ ತಡೆಗೋಡೆಗಳು (Seawalls), ಜಿಯೋಟ್ಯೂಬ್ಗಳು ಬಹುಮಹಡಿ ರೆಸಾರ್ಟ್ ಗಳು, ಅನಧಿಕೃತ ಲೇ ಔಟ್, ಬೀಚ್ ಅತಿಕ್ರಮಣಗಳು ಹೆಚ್ಚಳ ಕಂಡುಕೊಳ್ಳುತ್ತಿದೆ. ಸರ್ಕಾರ ಮತ್ತು ಇಲಾಖೆಗಳು ಇದನ್ನು “ಕರಾವಳಿ ರಕ್ಷಣೆ” ಅಥವಾ “ಪ್ರವಾಸೋದ್ಯಮ ಅಭಿವೃದ್ಧಿ” ಎಂದು ಸಮರ್ಥಿಸಿಕೊಂಡರೂ, ಅನೇಕ ಕಡೆಗಳಲ್ಲಿ ಇದರ ಪರಿಣಾಮವಾಗಿ ಕಡಲತೀರವೇ ನಾಶವಾಗುತ್ತಿದೆ. ಒಂದು ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿದರೆ, ಅದರ ಪಕ್ಕದ ಭಾಗಗಳಲ್ಲಿ ತೀವ್ರ ಕಡಲ್ಕೊರೆತ ಉಂಟಾಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಮನೆಗಳು, ದೇವಸ್ಥಾನಗಳು, ಮೀನುಗಾರಿಕಾ ಇಳಿಜಾರು ಪ್ರದೇಶಗಳು, ನೈಸರ್ಗಿಕ ಸಂಪತ್ತು ಸಮುದ್ರಪಾಲಾಗುತ್ತಿರುವ ದೃಶ್ಯಗಳು ಸಾಮಾನ್ಯವಾಗುತ್ತಿದೆ.
ಕೊರೆತ ಮತ್ತು ಪ್ರಕೃತಿ ನಾಶದ ಪ್ರಮಾಣ:
ಕೇರಳ ಮತ್ತು ದಕ್ಷಿಣ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ಸಾವಿರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಡಲ್ಕೊರೆತ, ಪರಿಸರ ನಾಶ ಕಂಡುಬಂದಿದೆ. ಸಮುದ್ರಮಟ್ಟದ ಏರಿಕೆ, ಚಂಡಮಾರುತಗಳ ತೀವ್ರತೆ, ಹವಾಮಾನ ಬದಲಾವಣೆ ಮತ್ತು ಮಾನವನ ವ್ಯಾವಹಾರಿಕ ಹಸ್ತಕ್ಷೇಪಗಳು ಇವೆಲ್ಲಕ್ಕೆ ಪ್ರಮುಖ ಕಾರಣಗಳು. ಮರಳುಗುಡ್ಡೆಗಳು (Sand Dunes), ಮ್ಯಾಂಗ್ರೂವ್ ಕಾಡುಗಳು ಮತ್ತು ಕಡಲತೀರದ ಸ್ವಾಭಾವಿಕ ಸಸ್ಯ ಸಂಕುಲಗಳು ಕಡಲತೀರಕ್ಕೆ ರಕ್ಷಣಾ ಕವಚದಂತೆ ಕೆಲಸ ಮಾಡುತ್ತವೆ. ಆದರೆ ಇವುಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶಪಡಿಸಿದಾಗ, ಸಮುದ್ರದ ಅಲೆಗಳಿಗೆ ಕಡಲತೀರ ಸಂಪೂರ್ಣವಾಗಿ ಅಸಹಾಯವಾಗುತ್ತದೆ ಮತ್ತು ನಾಶದ ಅಂಚಿಗೆ ತಲುಪುತ್ತದೆ. ನದಿಗಳು ಮತ್ತು ಕಡಲತೀರಗಳಲ್ಲಿ ನಡೆಯುವ ಅತಿರೇಕದ ಮರಳು ಗಣಿಗಾರಿಕೆ ಕರಾವಳಿಯ ಸಮತೋಲನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದೆ. ಸಮುದ್ರಕ್ಕೆ ನದಿಗಳ ಮೂಲಕ ಹೋಗಬೇಕಾದ ಮರಳು ಕಡಿಮೆಯಾದಾಗ, ಕಡಲತೀರ ತನ್ನ ಸಹಜ ರೂಪವನ್ನು ಕಳೆದುಕೊಳ್ಳುತ್ತದೆ. ಇದಲ್ಲದೆ ಕಲ್ಲಿನ ತಡೆಗೋಡೆಗಳು, ಗ್ರೋಯಿನ್ಗಳು (Groynes) ಮತ್ತು ಸಮುದ್ರದೊಳಗಿನ ತಡೆರಚನೆಗಳು ಒಂದು ಭಾಗವನ್ನು ರಕ್ಷಿಸಿದರೂ, ಪಕ್ಕದ ಪ್ರದೇಶಗಳಲ್ಲಿ ಅಲೆಗಳ ದಿಕ್ಕು ಬದಲಾಗುವ ಮೂಲಕ ಹೆಚ್ಚಿನ ನಾಶಕ್ಕೆ ಕಾರಣವಾಗುತ್ತವೆ.
ಆರ್ಥಿಕ ಲಾಭ vs ಸ್ಥಳೀಯ ಬದುಕು:
ಬೀಚ್ ಅಭಿವೃದ್ಧಿಯಿಂದ ಹೋಟೆಲ್ಗಳು, ವಾಟರ್ ಸ್ಪೋರ್ಟ್ಸ್, ಪ್ರವಾಸೋದ್ಯಮ ಉದ್ಯೋಗಗಳು ಹೆಚ್ಚಾಗುತ್ತಿವೆ ಎಂಬುದು ಸತ್ಯ. ಆದರೆ ಇದರ ಬೆಲೆ ಕಟ್ಟುತ್ತಿರುವವರು ಯಾರು?
ಸಣ್ಣ ಮಟ್ಟದ ಮೀನುಗಾರರು ತಮ್ಮ ದೋಣಿ ಇಳಿಸುವ ಸ್ಥಳಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮೀನು ಸಂಗ್ರಹದ ಸ್ವರೂಪ ಬದಲಾಗುತ್ತಿದೆ. ಸಮುದ್ರದ ಅಡಿಪಾಯದಲ್ಲಿ ಉಂಟಾಗುವ ಬದಲಾವಣೆಗಳು ಮೀನುಗಾರಿಕೆಗೆ ನೇರ ಹೊಡೆತ ನೀಡುತ್ತಿವೆ. ಕೆಲವು ಕಡೆಗಳಲ್ಲಿ ಅನಧಿಕೃತ ಕಟ್ಟಡಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡರೂ, ಸಮುದಾಯದ ವಿಶ್ವಾಸ ಈಗಾಗಲೇ ಕುಸಿದಿದೆ. ನೂರಾರು ವರುಷಗಳಿಂದ ಸಮುದ್ರ ತೀರಗಳಲ್ಲಿ ಬದುಕುತ್ತಿರುವ ಕುಟುಂಬಗಳು ರಿಯಲ್ ಎಸ್ಟೇಟ್ ನ ಕರಾಳ ಬಲೆಗೆ ಸಿಲುಕಿಕೊಳ್ಳುತ್ತಿವೆ.
ಕರಾವಳಿ ನಿಯಂತ್ರಣ ಕಾನೂನು (CRZ) ಮತ್ತು ಅದರ ಸವಾಲುಗಳು:
ಭಾರತದ ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳು ಕರಾವಳಿ ಪ್ರದೇಶಗಳಲ್ಲಿ ಏನು ಮಾಡಬಹುದು, ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತವೆ. ಆದರೆ 2019ರ ನಂತರದ ತಿದ್ದುಪಡಿಗಳು ಕೆಲವು ಅಭಿವೃದ್ಧಿಗಳಿಗೆ ಸಡಿಲಿಕೆ ನೀಡಿದ್ದು, ಪರಿಸರವಾದಿಗಳಿಂದ ಟೀಕೆಗೆ ಒಳಗಾಗಿದೆ.ಬಹುತೇಕ ಸಂದರ್ಭಗಳಲ್ಲಿ ಸ್ಥಳೀಯ ಆಡಳಿತಗಳು ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯದ ಕೊರತೆ ಕಂಡುಬರುತ್ತದೆ. ಅನುಮತಿ ಪ್ರಕ್ರಿಯೆಗಳು ಪಾರದರ್ಶಕವಾಗಿಲ್ಲ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ.
ಪರಿಸರ ತಜ್ಞರು ಮತ್ತು ಕರಾವಳಿ ಸಮುದಾಯಗಳು ಕರಾವಳಿ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರವಾಗಿ ಕೆಲವು ಪ್ರಮುಖ ಸಲಹೆಗಳನ್ನು ಮುಂದಿಡುತ್ತಿವೆ. ಕಲ್ಲಿನ ತಡೆಗೋಡೆಗಳು ಮತ್ತು ಕೃತಕ ನಿರ್ಮಾಣಗಳ ಬದಲು ಮ್ಯಾಂಗ್ರೂವ್ ಪುನರುಜ್ಜೀವನ, ಮರಳುಗುಡ್ಡೆಗಳ ಸಂರಕ್ಷಣೆ ಮುಂತಾದ ಪ್ರಕೃತಿ ಆಧಾರಿತ ಪರಿಹಾರಗಳಿಗೆ ಆದ್ಯತೆ ನೀಡಬೇಕು ಎಂಬುದು ಅವರ ಅಭಿಪ್ರಾಯ. ಇದರ ಜೊತೆಗೆ ನದಿಗಳು ಮತ್ತು ಕಡಲತೀರಗಳಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಗೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವಿದ್ದು, ಇದಿಲ್ಲದೆ ಕರಾವಳಿಯ ಸಮತೋಲನ ಕಾಪಾಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಯಾವುದೇ ಕರಾವಳಿ ಅಭಿವೃದ್ಧಿ ಯೋಜನೆಗೂ ಮೊದಲು ಸಾಮಾಜಿಕ ಹಾಗೂ ಪರಿಸರ ಪರಿಣಾಮ ಅಧ್ಯಯನಗಳನ್ನು ಕಡ್ಡಾಯಗೊಳಿಸಿ, ಅದರ ವರದಿಗಳನ್ನು ಸಾರ್ವಜನಿಕವಾಗಿ ಲಭ್ಯವಾಗಿಸುವುದು ಅಗತ್ಯವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಲ್ಲದೆ, ಸ್ಥಳೀಯ ಮೀನುಗಾರರು ಮತ್ತು ಕರಾವಳಿ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸದೇ ಯಾವುದೇ ಯೋಜನೆಗೆ ಅನುಮೋದನೆ ನೀಡಬಾರದು ಎಂಬುದು ಸಮುದಾಯಗಳ ಸ್ಪಷ್ಟ ಬೇಡಿಕೆ. ಇಂಜಿನಿಯರಿಂಗ್ ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಯನ್ನು ಸಮತೋಲನದಿಂದ ಸಂಯೋಜಿಸುವ ಮಾದರಿಯೇ ಕರಾವಳಿಯ ಭವಿಷ್ಯವನ್ನು ಸುರಕ್ಷಿತಗೊಳಿಸಬಲ್ಲ ಮಾರ್ಗವೆಂದು ಪರಿಣಿತರು ಎಚ್ಚರಿಸುತ್ತಾರೆ. ಅನಧಿಕೃತ ರೆಸಾರ್ಟ್ ಗಳು, ಬಹುಮಹಡಿ ಕಟ್ಟಡಗಳ ನಿಯಂತ್ರಣ ತ್ವರಿತವಾಗಿ ಮಾಡಬೇಕಿದೆ.
ಅರಬ್ಬಿ ಸಮುದ್ರದ ದಕ್ಷಿಣ ಕರಾವಳಿ ಇಂದು ದ್ವಂದ್ವ ದಾರಿಯಲ್ಲಿ ಸಿಲುಕಿಕೊಂಡಿದೆ — ಅತಿರೇಕದ ಅಭಿವೃದ್ಧಿಯ ದಾರಿ ಮತ್ತು ಸಮತೋಲನದ, ದೀರ್ಘಕಾಲೀನ ಬದುಕಿನ ದಾರಿ. ಈ ತೀರ್ಮಾನವು ಸರ್ಕಾರಗಳ ಕೈಯಲ್ಲಿ ಮಾತ್ರವಲ್ಲ, ಸಮಾಜದ ಒಟ್ಟಾರೆ ಜವಾಬ್ದಾರಿಯೂ ಹೌದು. ಮರಳು ಮೌನವಾಗಿ ಸರಿಯುತ್ತದೆ. ಆದರೆ ಅದು ಸರಿದಾಗ, ಇತಿಹಾಸ, ಬದುಕು ಮತ್ತು ಭವಿಷ್ಯವೂ ಅದರ ಜೊತೆಗೆ ಸರಿದು ಹೋಗುತ್ತದೆ. ಮುಂದಿನ ದಿನಗಳಲ್ಲಿ ಕಡಲತೀರಗಳು ಪ್ರವಾಸೋದ್ಯಮದ ಆಕರ್ಷಣೆಯಾಗಿ ಅಲ್ಲ, ಪರಿಸರ ನಿರ್ಲಕ್ಷ್ಯದ ಸಾಕ್ಷಿಯಾಗಿ ಉಳಿಯುವ ಅಪಾಯವಿದೆ ಎಂಬುದು ಪರಿಸರವಾದಿಗಳ ಗಂಭೀರ ಎಚ್ಚರಿಕೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ವಿನಾಶವೊಂದು ಸನಿಹ ಸರಿಯುತ್ತಿದೆ.


