ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಿಂದ ಸುಮಾರು 35 ಕಿ.ಮೀ ಪೂರ್ವಕ್ಕೆ ಸಾಗಿದರೆ ಬೆಟ್ಟ ಗುಡ್ಡಗಳ ಆಲಿಂಗನದಲ್ಲಿ ಕಾಡು ಮರಗಳ ಮಡಿಲಲ್ಲಿ, ಸುಂದರ ನಿಸರ್ಗದ ಒಂದು ಪುಟ್ಟ ಊರು ಸಿಗುತ್ತದೆ. ತಾಯಿ ಬ್ರಾಹ್ಮಿ ದುರ್ಗಾಪರಮೇಶ್ವರಿಯ ಶಕ್ತಿಧಾಮ ಕಮಲಶಿಲೆ. 90 ರ ದಶಕದಲ್ಲಿ ಕಮಲಶಿಲೆ ಅದಿನ್ನೂ ತಂತ್ರಜ್ಞಾನ, ಆಧುನಿಕತೆ ಮಾತ್ರವಲ್ಲ ಮೂಲಭೂತ ಸೌಕರ್ಯಗಳ ಅಭಾವ ಎದುರಿಸುತ್ತಿದ್ದ ಒಂದು ಬಡ ಹಳ್ಳಿ. ಜೀವನದ ವೇಗವನ್ನು ಸೂರ್ಯೋದಯ, ಋತುಗಳು ಮತ್ತು ಹೊಲ ಗದ್ದೆಗಳು ನಿರ್ಧರಿಸುತ್ತಿದ್ದವು. ಇಂತಹ ಸಮಾಜದಲ್ಲಿ ಜೀವನ ಅತೀ ಸರಳ. ಆದರೆ ಕಷ್ಟಕರ. ಆದರೂ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ನಮ್ಮ ಊರು ಬಹಳ ಶ್ರೀಮಂತವಾಗಿತ್ತು.
ಇತ್ತೀಚಿಗೆ ಗೆಳೆಯನೊಬ್ಬ ರಚಿಸಿದ ಗೀತೆ ಆಲಿಸಿದೆ. “ನಮ್ಮೂರು ಚಂದಾ ಚಿನ್ನಿ.. ನೀನೊಮ್ಮೆ ಬರಬೇಕಮ್ಮಿ”. ಹಳ್ಳಿ ಜೀವನದ ಸಾಂಸ್ಕೃತಿಕ ಜೀವನಶೈಲಿಯನ್ನು ಹಾಡಿ ಹೊಗಳುವ ಹಾಡದು. ನಮ್ಮೂರು ಮತ್ತೊಮ್ಮೆ ನೆನಪಾಯ್ತು. ಹುಟ್ಟಿದಂದಿನಿಂದ ಉಸಿರಾಡಿದ ಆ ಮಣ್ಣಿನಲ್ಲಿ ಅವರೆಲ್ಲರೂ ನೆನಪಾದರು. ಉಸಿರು ತುಂಬಿದ ಊರು, ಅಪ್ಪ, ಅಮ್ಮ, ಸ್ನೇಹಿತರ ದಂಡು, ಆಟ ಪಾಠ, ಬದುಕು ಕಟ್ಟಿ ಕೊಟ್ಟ ಶಾಲೆ ತುಂಬಾ ನೆನಪಾಯಿತು. ಇವೆಲ್ಲದರ ಮಧ್ಯೆ ಮಂದಹಾಸ ಮೂಡಿಸಿ ಅತಿಯಾಗಿ ನೆನಪಾಗಿದ್ದು ಒಂದು ಉತ್ಕೃಷ್ಟ ವ್ಯಕ್ತಿತ್ವ, ನಮ್ಮೂರಿನ ಹೈಸ್ಕೂಲ್ ಮೇಸ್ಟ್ರು ಸುರೇಂದ್ರ ಶೆಟ್ಟಿ ಸರ್. ಇವಿಷ್ಟು ಅವರಿಗೆ, ಅವರು ಪಟ್ಟ ಶ್ರಮಕ್ಕೆ, ಅವರ ಗುಣಕ್ಕೆ, ತೀರಿಸಲಾಗದ ಋಣಕ್ಕೆ ಒಂದು ನುಡಿನಮನ.
ಪ್ರಾಥಮಿಕ ಹಂತದ ಶಾಲೆಯನ್ನು ಮುಗಿಸಿ ಪ್ರೌಢಶಾಲೆಗೆ ತೆರಳಬೇಕಾದರೆ ನಮ್ಮೂರಿನಿಂದ ದೂರದ ಸಿದ್ದಾಪುರ ಅಥವಾ ಕುಂದಾಪುರಕ್ಕೆ ಹೋಗಬೇಕಿತ್ತು. ಆಗಿನ್ನೂ ರಸ್ತೆ ಡಾಂಬರೀಕರಣ ಆಗಿರಲಿಲ್ಲ. ಬಿಸಿಲಲಿ ಧೂಳು, ಮಳೆಯಲಿ ಕೆಸರಿನ ಉಡುಗೆ ಧರಿಸುವ ಮಣ್ಣಿನ ರಸ್ತೆ. ಆಗೊಮ್ಮೆ ಈಗೊಮ್ಮೆ ಬಸ್ಸು ಏನೋ ಬಂದು ಹೋಗುತ್ತಿತ್ತು. ಆದರೆ ಬಸ್ಸಿನಲ್ಲಿ ದೂರದ ಊರಿಗೆ ತೆರಳಿ ವಿದ್ಯಾಭ್ಯಾಸ ಪಡೆಯುವಷ್ಟು ಆರ್ಥಿಕ ಶಕ್ತಿ ನಮ್ಮೂರಿನಲ್ಲಿ ಬಹುತೇಕರಿಗೆ ಇರಲಿಲ್ಲ. ಅಂಗಳದಲ್ಲೇ ಕುಣಿಯುತ್ತಿದ್ದ ಬಡತನ, ಚಿಕ್ಕಾಸು ಇಲ್ಲದ ಖಾಲಿ ಜೇಬಿನ ಆ ದಿನಗಳಲ್ಲಿ ನಮ್ಮೂರಿನ ನೂರಾರು ಮಕ್ಕಳಿಗೆ ಬೆನ್ನೆಲುಬಾಗಿದ್ದು, ನಮ್ಮ ತಂದೆ ತಾಯಿಯ ಕಣ್ಣುಗಳಲ್ಲಿನ ಕನಸಿಗೆ ತುಂಬು ಭರವಸೆ ತುಂಬಿದ್ದು ನಮ್ಮ ಊರಿನ ಕನ್ನಡ ಮಾಧ್ಯಮ ಶಾಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರೀ ಪ್ರೌಢಶಾಲೆ. ಹೈಸ್ಕೂಲ್ ದಿನಗಳಲ್ಲಿ, ಆ ಒಂದಂತಸ್ತಿನ ಕಟ್ಟಡವೇ ನಮ್ಮ ಮನೆ ಆಗಿತ್ತು, ಮತ್ತು ಆ ಮನೆಯನ್ನು ತನ್ನ ಹೆಗಲ ಮೇಲೆ ಹೊತ್ತು, ಬಾಳಿನ ಶಿಷ್ಟತೆ ಕಲಿಸಿದವರು, ಬದುಕು ಕಟ್ಟಿಕೊಟ್ಟವರು, ಬಾಳಿನ ಉದ್ಧಕ್ಕೂ ದಾರಿ ದೀಪವಾದವರು ನಮ್ಮ ಪ್ರಾಂಶುಪಾಲರು, ಶ್ರೀ ಸುರೇಂದ್ರ ಶೆಟ್ಟಿ ಸರ್. ಅವರ ನಡೆ, ಅವರ ಮಾತು, ಅವರ ನೋಟ, ಅವರ ಪಾಠ, ಅವರ ತ್ಯಾಗ ಪ್ರತಿಯೊಂದು ನನ್ನೊಳಗೆ ಇಂದಿಗೂ ಅವಡುಗಚ್ಚಿ ನಿಂತಿದೆ. ಅವರು ಇದ್ದರೆ ನಾವು ಸುರಕ್ಷಿತ, ಶಾಲೆ ಇದ್ದರೆ ನಾವು ಸಂಪೂರ್ಣ ಎಂಬಂತಹ ಬದುಕಿನ ಭಾವ ಸಿಂಪಡಿಸಿದವರು.
ಜ್ಞಾನ ದೀಪ ಹಚ್ಚಿದ ಆದರ್ಶ ಪುರುಷ:
ಶಾಲೆ, ಮಕ್ಕಳು ಅವರ ಶಿಕ್ಷಣ, ಅವರ ಭವಿಷ್ಯ ಎಂಬ ಚೌಕಟ್ಟಿನಲ್ಲೇ ತಮ್ಮ ಪೂರ್ತಿ ಜೀವನ ಬದುಕಿದ ಸುರೇಂದ್ರ ಮೇಸ್ಟ್ರು ಮಾತಿಗಿಂತ ನಡೆ ಮೇಲು ಎಂಬ ಜೀವನ ತತ್ವದಲ್ಲಿ ಬದುಕಿದವರು. ಮಕ್ಕಳ ಸಮಸ್ಯೆಯನ್ನು ಅವರು ಶಿಕ್ಷಕರ ದೃಷ್ಟಿಯಿಂದ ಅಲ್ಲ — ಒಬ್ಬ ತಂದೆಯ ಜವಾಬ್ದಾರಿಯುತ ದೃಷ್ಟಿಯಿಂದ ನೋಡುತ್ತಿದ್ದರು. ಮೇಸ್ಟ್ರು ಎಂದಿಗೂ ದೊಡ್ಡ ಉಪನ್ಯಾಸಕರಲ್ಲ. ಅವರ ಬದುಕೇ ನಮಗೆಲ್ಲ ದೊಡ್ಡ ಪಾಠವಾಯಿತು. ಸ್ವಾರ್ಥವಿಲ್ಲದ ಸೇವೆಯಿಂದ, ನಿಷ್ಕಲಂಕಿತ ಜೀವನದಿಂದ, ಸಮರ್ಪಿತ ಕಾರ್ಯತತ್ಪರತೆಯಿಂದ, ತಮ್ಮ ಮಾತಿನ ಮೂಲಕ, ತಮ್ಮ ನೋಟದ ಮೂಲಕ, ತಮ್ಮ ಶ್ರಮದ ಮೂಲಕ, ತಮ್ಮ ಸದಾಶಯದ ಬದುಕಿನ ಮೂಲಕ ಊರಿನ ಮಕ್ಕಳ ಶೈಕ್ಷಣಿಕ ಬದುಕನ್ನು ಉತ್ತುಂಗಕ್ಕೆ ಏರಿಸಿದವರು.
ಶಾಲೆ ಎಂದರೆ ಅವರಿಗೊಂದು ಕಟ್ಟಡವಲ್ಲ — ಕೈಲಾಸ:
ಒಂದು ಅಂತಸ್ತಿನ ಸಣ್ಣ ಶಾಲೆಯನ್ನು ತನ್ನ ಹೆಗಲ ಮೇಲೇರಿಸಿ ಪೋಷಿಸಿದ ಸುರೇಂದ್ರ ಮೇಸ್ಟ್ರು ಪ್ರತಿದಿನ ಪ್ರತಿ ವರ್ಷ ಶಾಲೆಯ ವ್ಯವಸ್ಥೆಗೆ, ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದವರು. ಅವರ ಅವಿರತ ಪ್ರಯತ್ನದಿಂದಾಗಿ ಶಾಲೆಯ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟ ಉನ್ನತ ಮಟ್ಟಕ್ಕೆ ಏರಿದೆ. ತಮಗಿದ್ದ ಅಲ್ಪ ಸ್ವಲ್ಪ ಸಂಬಳದಲ್ಲಿ ಮಾರುದ್ಧ ದಾರಿ ಕ್ರಮಿಸಿ ಅದೆಂದೂ ವಿರಮಿಸದೇ ಶಾಲೆಯನ್ನೇ ತಮ್ಮ ಮನೆಯಂತೆ ಕಂಡು, ಶಾಲೆಯ ವಿದ್ಯಾರ್ಥಿಗಳನ್ನು ಮಕ್ಕಳಂತೆ ಪೋಷಿಸುತ್ತಿದ್ದರು ಸುರೇಂದ್ರ ಮೇಸ್ಟ್ರು. ಅಲ್ಲಿಯ ಕಟ್ಟಡ, ಆ ಬಯಲು, ಸುರೇಂದ್ರ ಸರ್ ನ ಅಚಲ ಭರವಸೆ ಮತ್ತು ಕನಸು ಇಂದು ನೂರಾರು ಸಫಲ ವ್ಯಕ್ತಿತ್ವಗಳನ್ನು ನಿರ್ಮಿಸಿದೆ. ಡಾಕ್ಟರ್, ಇಂಜಿಯರ್, ಉದ್ಯಮಿಗಳ ಉದುದ್ದ ಪಟ್ಟಿಯೇ ಇದೆ.
ಕೂಲಿ ಕೆಲಸದ ಟ್ರೆಂಡ್ ಮುರಿದರು:
ಆ ಕಾಲಕ್ಕೆ ಬಹುತೇಕ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನ ಜೀವನಶೈಲಿ ಬದುಕುವ ಅನಿವಾರ್ಯತೆಗೆ ಸಿಲುಕೊಂಡಿದ್ದರು. ಒಂದು ಸಣ್ಣ ಹಳ್ಳಿಯ ಚೌಕಟ್ಟಿಗೆ ಹೊರಗಿನ ಪ್ರಪಂಚ ಕೈಗೆಟಕದ ನಕ್ಷತ್ರದಂತೆ. ಆರ್ಥಿಕವಾಗಿ ದುರ್ಬಲವಾಗಿದ್ದರಿಂದ ಬಹುತೇಕ ಮಕ್ಕಳು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ದೂರದ ಬೆಂಗಳೂರು, ಮುಂಬಾಯಿ, ಹೈದರಾಬಾದಿಗೆ ಹೋಟೆಲ್ ಕೆಲಸಕ್ಕೋ, ಕೂಲಿ ಕೆಲಸಕ್ಕೋ ಹೋಗುವ ದಾಟಿ ಸಾಮಾನ್ಯವಾಗಿತ್ತು. ಹಣ ಸಂಪಾದಿಸುವ ದೊಡ್ಡ ಕನಸು ಹೊತ್ತು ಹೋಗುವ ಅಂತಹ ಸಾವಿರಾರು ಯುವಕ ಯುವತಿಯರ ಹೋರಾಟ, ಬದುಕಿನ ಪರದಾಟಕ್ಕೆ ಶಿಕ್ಷಣ, ಸೂಕ್ತ ಮಾರ್ಗದರ್ಶನ, ಮತ್ತು ಬೆಂಬಲದ ಮೂಲಕ ಪೂರ್ಣವಿರಾಮ ನೀಡಿದ್ದು ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ಶಾಲೆ ಮತ್ತದರ ಚಿರ ಪೋಷಕ ಸುರೇಂದ್ರ ಶೆಟ್ಟಿ ಮೇಸ್ಟ್ರು.

ಕರ್ಮನಿಷ್ಠೆ ಮತ್ತು ಕರ್ತವ್ಯನಿಷ್ಠೆಗೆ ಸಂದ ಗೌರವ:
ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅನನ್ಯ ಸೇವೆ, ನಿಷ್ಠೆ ಮತ್ತು ಮಾನವೀಯತೆಯಿಂದ ಅನೇಕ ಪುರಸ್ಕಾರಗಳಿಗೆ ಪಾತ್ರರಾದ ಸುರೇಂದ್ರ ಶೆಟ್ಟಿ ಸರ್, ಕಳೆದ ಎರಡು ದಶಕಗಳಲ್ಲಿ ಅನೇಕ ಗೌರವಗಳನ್ನು ತಮ್ಮ ಸಾಧನೆಗೆ ಪ್ರತೀಕವೆಂಬಂತೆ ಮುಡಿಗೇರಿಸಿಕೊಂಡಿದ್ದಾರೆ. 2003–2004ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ದೊರೆತ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಅವರ ಶೈಕ್ಷಣಿಕ ಪಯಣದ ಮೊದಲ ದೊಡ್ಡ ಗುರುತಾಗಿತ್ತು. ನಂತರ 2007–2008ರಲ್ಲಿ ಅವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದರು. 2010–11 ಮತ್ತು 2015–2016ರಲ್ಲಿ ಪಡೆದ ಜಿಲ್ಲಾ ಸಾಧಕ ಶಿಕ್ಷಕ ಪ್ರಶಸ್ತಿಗಳು ಅವರ ನಿರಂತರ ಶ್ರಮಕ್ಕೆ ಸಂದ ಜಯ. 2021ರಲ್ಲಿ ರೋಟರಿ ಕ್ಲಬ್ ಅಂಪಾರಿನಿಂದ ಪಡೆದ Nation Builder Award, 2022ರಲ್ಲಿ ತಾಲೂಕು ಯುವ ಬಂಟರ ಸಂಘದಿಂದ ದೊರೆತ ವಿದ್ಯಾರತ್ನ ಪ್ರಶಸ್ತಿ, 2023ರಲ್ಲಿ ನಮ್ಮೂರ ಸಂಭ್ರಮದಲ್ಲಿ ಪ್ರದಾನವಾದ ನಮ್ಮೂರ ಯುವ ಚೇತನ ಪ್ರಶಸ್ತಿ— ಇವೆಲ್ಲವೂ ಅವರ ಸಮಾಜಮುಖಿ ಸೇವೆಯ ಪ್ರತಿಬಿಂಬ. 2025ರಲ್ಲಿ ಸುಪ್ರಸಿದ್ಧ ಡಾ. ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರವು ಅವರ ಗೌರವಪಟ್ಟಿಗೆ ಸೇರಿ ಹೊಸ ತೇಜಸ್ಸಿನ ಅಲೆಯೆಬ್ಬಿಸಿತು. ಅದೇ ವರ್ಷ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ (ರಿ), ಬೆಂಗಳೂರು ಆಯೋಜಿಸಿದ ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅವರು ಶಿಕ್ಷಕರಾಗಿ ಸಾಧಿಸಿರುವ ಜೀವನಕ್ಕೆ ಸ್ವರ್ಣ ಮುಕುಟದಂತೆ ನಿಂತಿದೆ.
ಆ ಕಾಲಕ್ಕೆ ಒಂದು ಊರಿನ ಸಾಮಾಜಿಕ ಸ್ಥಿತಿಗತಿಯನ್ನು ಅವಲೋಕಿಸಿ, ಜನರ ಪರಿಸ್ಥಿತಿ ಮನಸ್ಥಿತಿಯನ್ನು ಅರಿತುಕೊಂಡು, ಶಿಕ್ಷಣ ಕ್ರಾಂತಿವೆಬ್ಬಿಸಿ, ಸಾಮಾಜಿಕ ಬದಲಾವಣೆಗೆ ಅಡಿಪಾಯವಿತ್ತು ಅವೆಷ್ಟೋ ಕುಟುಂಬಗಳ ಧಿಕ್ಕೂ ಬದಲಾಯಿಸಿ ನೂರಾರು ವ್ಯಕ್ತಿತ್ವಗಳ ಬದುಕು ರೂಪಿಸಿದ ಸುರೇಂದ್ರ ಮೇಸ್ಟ್ರು ಇಡೀ ಊರಿನ ಭವಿಷ್ಯವನ್ನೇ ಕಟ್ಟಿದ ಆದರ್ಶ ಗ್ರಾಮ ಶಿಕ್ಷಕ.
ಇದು ನಮ್ಮ ಊರು – ಇವರು ನಮ್ಮವರು!


