ಉಡುಪಿಯ ಈ ನಟಿ ಕನ್ನಡ ಚಿತ್ರರಂಗದಲ್ಲಿ ಬರೆದ ಇತಿಹಾಸವೇನು?

admin
Actress Harini with Dr. Rajkumar - Photo Courtesy: Karnataka Varthe

ಕನ್ನಡ ಚಿತ್ರರಂಗಕ್ಕೂ ಕರಾವಳಿಗೂ ಪ್ರಾಥಮಿಕ ಹಂತದಿಂದಲೂ ಗಾಢವಾದ ನಂಟಿದೆ. 50-60 ರ ದಶಕದಲ್ಲೇ ಚಲನಚಿತ್ರಗಳು ಕರಾವಳಿಯಲ್ಲಿ ತುಳು ಚಿತ್ರರಂಗದ ಮೂಲಕ ಘರ್ಜಿಸಲು ಆರಂಭಿಸಿತ್ತು. ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕರಾವಳಿಯಲ್ಲಿ ಒಂದು ವಿಶಿಷ್ಟ ಅಷ್ಟೇ ನೈಜ ಪ್ರತಿಭೆಗಳು ಕಾಣ ಸಿಗುತ್ತವೆ. ಬಹುಶಃ ಕಡಲತಡಿಯ ಈ ಮಣ್ಣಿನಲ್ಲಿ ಕಲೆ, ಸಾಹಿತ್ಯ, ಸೃಜನಶೀಲತೆ ಪ್ರಾಕೃತಿಕವಾಗಿ ಅಡಕಗೊಂಡಿದೆ. ಚಲನಚಿತ್ರ ರಂಗದಲ್ಲಿ ಶ್ರಮ ಪಟ್ಟು ಉತ್ತುಂಗಕ್ಕೇರಿದ ಹಲವು ಮೇರು ನಟ ನಟಿಯರು, ದಿಗ್ಗಜರು ಕರ್ನಾಟಕದ ಕಲೆಯನ್ನು ಸುಸ್ಥಿರ ಇಡುವಲ್ಲಿ ಅಗ್ರಗಣ್ಯರಾದವರು. ಈಗಿನ ಯುವಕರಿಗೆ ಇತ್ತೀಚಿನ ನಟ ನಟಿಯರ ಬಗ್ಗೆ ಮಾತ್ರ ಗೊತ್ತಿರಬಹುದು. ಆದರೆ ಹಳೇ ಚಿತ್ರಗಳನ್ನು ಮೆಲುಕು ಹಾಕುತ್ತಾ ಹೋದರೆ ಉಡುಪಿ ಮೂಲದ ಈ ನಟಿಯ ಸಾಧನೆ ನಮ್ಮೆಲ್ಲರನ್ನೂ ಅವಕ್ಕಾಗಿಸಬಹುದು. ಈಗಿನ ಬಹುತೇಕರಿಗೆ ಪರಿಚಯವೇ ಇಲ್ಲದ ಇವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಹುಭಾಷಾ ಚಲನಚಿತ್ರಗಳಲ್ಲಿ 50ರ ದಶಕದಲ್ಲೇ ಬಹು ದೊಡ್ಡ ಛಾಪು ಮೂಡಿಸಿದವರು. ಇತಿಹಾಸ ಬರೆದವರು. ಉಡುಪಿ ಮೂಲದ ಹರಿಣಿ ಕಣ್ಮನ ತಣಿಸಿದವರು. ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ, ಒಂದು ಹೆಸರು ಸಾಟಿಯಿಲ್ಲದ ನಕ್ಷತ್ರದಂತೆ ಮಿನುಗಿತ್ತು – ಹರಿಣಿ. 1950 ಮತ್ತು 1960 ರ ದಶಕದಲ್ಲಿ ಸ್ಯಾಂಡಲ್‌ವುಡ್ ಅನ್ನು ರೂಪಿಸಿದ ನಾಯಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಉಡುಪಿಯ ಹರಿಣಿಯ ಕಥೆಯು ಪ್ರತಿಭೆ, ದಿಟ್ಟತೆ, ಕ್ರಿಯಾಶೀಲತೆಯ ಒಂದು ಅದ್ಭುತ ಪಯಣ.

9ರ ಹರೆಯದಲ್ಲೇ ಬಾಲ ನಟಿಯಾಗಿ ಪಯಣ ಆರಂಭ:
1936 ರಲ್ಲಿ ಉಡುಪಿಯ ತುಳು ಮಾತನಾಡುವ ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಪಣಿಯಾಡಿ ಶ್ರೀನಿವಾಸ ಉಪಾಧ್ಯ ಮತ್ತು ಭಾರತಿ ದಂಪತಿಗಳ ನಾಲ್ಕನೇ ಮಗುವಾಗಿ ಜನಿಸಿದ ಹರಿಣಿ 9ರ ಹರೆಯದಲ್ಲೇ ಚಿತ್ರರಂಗ ಹೊಕ್ಕಿದವರು. ತನ್ನ ನಿರರ್ಗಳ ಭಾಷಾ ಪ್ರಯೋಗದಿಂದ ಬೆರುಗುಗೊಳಿಸಿದ್ದ 9ರ ಪುಟ್ಟ ಹುಡುಗಿ ಹರಿಣಿ ಬಾಲ ನಟಿಯಾಗಿ ‘ಶ್ರೀಮುರುಗನ್’ ಮತ್ತು ‘ಕನ್ನಿಕಾ’ ತಮಿಳು ಚಿತ್ರಗಳಲ್ಲಿ ನಟಿಸಿ ಶಹಭಾಶ್ ಎನಿಸಿಕೊಂಡವರು.

ಹರಿತವಾದ ಹರಿಣಿ ಯುಗ:
15ರ ಇಳಿವಯಸ್ಸಿನಲ್ಲಿ 1951ರ ಚಿತ್ರ “ಜಗನ್ಮೋಹಿನಿ” ಯಲ್ಲಿ ಮೋಹಿನಿ ಪಾತ್ರವನ್ನು ಸಮರ್ತವಾಗಿ ನಿರ್ವಹಿಸಿದ ಹರಿಣಿ ತನ್ನ ಬದುಕಿನ ತಾರಾ ಪ್ರಪಂಚಕ್ಕೆ ಜಿಗಿಯಲು ಅಣಿಯಾಗಿದ್ದರು. 5 ತಿಂಗಳಿಗಿಂತಲೂ ಮಿಕ್ಕಿ ಪರದೆಯ ಮೇಲೆ ರಾರಾಜಿಸಿದ ಈ ಚಿತ್ರ 25 ವಾರ ಪ್ರದರ್ಶನ ಕಂಡ ಕನ್ನಡ ಮೊತ್ತ ಮೊದಲ ಚಿತ್ರ ಎಂದು ಹೆಗ್ಗಳಿಕೆ ಪಡೆಯಿತು. ಹರಿಣಿಯ ಮೊಟ್ಟ ಮೊದಲ ಚಿತ್ರವೇ ಅಸಂಖ್ಯ ದಾಖಲೆಗಳನ್ನು ಮುರಿದು ಬಿಟ್ಟಿತ್ತು. ಬಳಿಕ ಹಲವಾರು ಭಾಷೆಗಳಲ್ಲಿ ರಿಮೇಕ್ ಗೊಂಡ ಈ ಚಿತ್ರ ಕನ್ನಡ ಚಿತ್ರರಂಗ ಕಂಡ ಬ್ಲಾಕ್ ಬಸ್ಟರ್ ಗಳಲ್ಲಿ ಒಂದು. ಹರಿಣಿ, ಮನೆ ಮಾತಾದರು. ಇಡೀ ಭಾರತದ ಚಿತ್ರ ರಸಿಕರ ಸಂಭ್ರಮದಲ್ಲಿ ತನ್ನ ಹೆಸರನ್ನು ಸುವರ್ಣ ಅಕ್ಷರದಲ್ಲಿ ಅಚ್ಚಿಸಿಕೊಂಡರು.

ಪರದೆ ಮೇಲೆ ಸ್ವಿಮ್ ಸೂಟ್ (ಈಜು ಉಡುಗೆ) ಧರಿಸಿದ ಕನ್ನಡದ ಮೊಟ್ಟ ಮೊದಲ ನಟಿ:

ಜಗನ್ಮೋಹಿನಿ ಚಿತ್ರ ಬಿಡುಗಡೆಗೊಂಡಾಗ ಚಿತ್ರ ರಸಿಕರು ಅವಕ್ಕಾಗಿದ್ದರು. ಮೋಹಿನಿ ಪಾತ್ರಧಾರಿ ಹರಿಣಿ ಸ್ವಿಮ್ ಸೂಟ್ ಧರಿಸಿಕೊಂಡು ಪರದೆಯ ಮೇಲೆ ರಾರಾಜಿಸಿ ರಾತ್ರೋ ರಾತ್ರಿ ಮನಸ್ಸು ಗೆದ್ದು ಬಿಟ್ಟಿದ್ದರು. ಈ ಮೂಲಕ ಸ್ವಿಮ್ ಸೂಟ್ ಧರಿಸಿ ನಟನೆ ಮಾಡಿದ ಕನ್ನಡದ ಮೊದಲ ನಟಿಯಾಗಿ ಹರಿಣಿ ಇತಿಹಾಸ ಬರೆದು ಬಿಟ್ಟಿದ್ದರು. ಸಾಮಾನ್ಯಾವಾಗಿ ಸಾಂಸ್ಕೃತಿಕ ರೀತ್ಯ ಉಡುಗೆ ಉಡುತ್ತಿದ್ದ ಕಾಲದಲ್ಲಿ ದಿಟ್ಟ ವಿನೂತನ ಪ್ರಾಯ್ತ್ನಕ್ಕೆ ಕೈ ಹಾಕಿದ ಹರಿಣಿ ಹೊಸ ಟ್ರೆಂಡ್ ಶೆಟ್ಟರ್ ಆಗಿ ಹೊರಹೊಮ್ಮಿದ್ದರು.

ಪ್ರಪ್ರಥಮ ಪಂಚಭಾಷಾ ಕನ್ನಡ ನಟಿ!
ಒಂದು ವರದಿಯ ಪ್ರಕಾರ, ದ್ವಿಭಾಷಾ ಯೋಜನೆಯಾದ ತನ್ನ ಎರಡನೇ ಚಿತ್ರ ರತ್ನದೀಪ್ (ತಮಿಳು + ಹಿಂದಿ) ನ ಚಿತ್ರೀಕರಣದ ಸಮಯದಲ್ಲಿ – ಅವರ ಅಭಿನಯವನ್ನು ಹೊಗಳಿ 200 ಕ್ಕೂ ಹೆಚ್ಚು ಪತ್ರಗಳು ಬಂದಿವೆ ಎಂದು ಹೇಳಲಾಗಿದೆ. ಇದು ಆ ಕಾಲಕ್ಕೆ ಅಸಾಮಾನ್ಯವಾಗಿತ್ತು ಅಲ್ಲದೆ ಹರಿಣಿಯ ಪ್ರಸಿದ್ಧಿಗೆ ಕನ್ನಡಿಯಂತಿತ್ತು. ಕನ್ನಡ, ತೆಲುಗು, ಮಲಯಾಳಂ , ಹಿಂದಿ, ತಮಿಳು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ ಹರಿಣಿ ಪ್ರಪ್ರಥಮ ಪಂಚಭಾಷಾ ಕನ್ನಡ ನಟಿ ಎಂದು ಮತ್ತೊಂದು ಇತಿಹಾಸ ನಿರ್ಮಿಸಿದವರು.

ಬಹುಮುಖ ವೃತ್ತಿಜೀವನ – ನಟಿ ಮತ್ತು ನಿರ್ಮಾಪಕಿ:
ಮುಂದಿನ ಎರಡು ದಶಕಗಳಲ್ಲಿ, ಹರಿಣಿ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದರು. ಡಾ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ ಕುಮಾರ್ ರಂತಹ ಸೂಪರ್ ಸ್ಟಾರ್ ಗಳೊಂದಿಗೆ ಹಲವಾರು ಚಿತ್ರಗಳಲ್ಲಿ ಹರಿಣಿ ನಟಿಸಿದ್ದರು. ನಂದಾ ದೀಪ, ಕನ್ಯಾ ದಾನ, ಗಂಧರ್ವ ಕನ್ಯಾ, ವಿಚಿತ್ರ ಪ್ರಪಂಚ, ನಾಂದಿ ಮತ್ತು ಇನ್ನೂ ಅನೇಕ ಗಮನಾರ್ಹ ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು ಆ ದಶಕದ ಹೈ-ಡಿಮ್ಯಾಂಡ್ ನಾಯಕಿಯಾಗಿ ಮೆರೆದಾಡಿದವರು. ನಟನೆ ಮಾತ್ರವಲ್ಲದೆ ಚಲನಚಿತ್ರ ನಿರ್ಮಾಕಿಯಾಗಿಯೂ ಬೆಳೆದು ನಿಂತ ಹರಿಣಿ ತಮ್ಮ ಸಹೋದರರೊಂದಿಗೆ, ಶ್ರೀ ಭಾರತಿ ಚಿತ್ರ ಮತ್ತು ವಿಜಯ ಭಾರತಿಯಂತಹ ಬ್ಯಾನರ್‌ಗಳ ಅಡಿಯಲ್ಲಿ ಹಲವಾರು ಅರ್ಥಪೂರ್ಣ ಚಲನಚಿತ್ರಗಳನ್ನು ನಿರ್ಮಿಸಿದರು.

ಸಡನ್ ಆಗಿ ಸುಮ್ಮನಾದ ಹರಿಣಿ:
ತನ್ನ ಜೀವನದ ಸ್ಪಾಟ್‌ಲೈಟ್‌ನಲ್ಲಿ ಇದ್ದು ಮೆರೆದಾಡುತ್ತಿದ್ದಾಗಲೇ ಹರಿಣಿ ಚಿತ್ರರಂಗದಿಂದ ಸಡನ್ ಆಗಿ ದೂರ ಸರಿಯಲು ನಿರ್ಧರಿಸಿದ್ದರು. ೧೯೬೮ ರ ಚಿತ್ರ ಸತಿ ಸುಕನ್ಯಾ ಹರಿಣಿಯವರ ಕೊನೆಯ ಚಿತ್ರ. ಆ ಬಳಿಕ ಅವರು 1972 ರಲ್ಲಿ ವಿವಾಹವಾಗಿ ವಿದೇಶಕ್ಕೆ ತೆರಳಿದರು – ವರದಿಯ ಪ್ರಕಾರ ಸೌದಿ ಅರೇಬಿಯಾದಲ್ಲಿ ೧೨ ವರುಷ ಬದುಕಿ ಬಳಿಕ ಭಾರತಕ್ಕೆ ಹಿಂತಿರುಗಿ ಬೆಂಗಳೂರಿನಲ್ಲಿ ನೆಲೆಸಿದರು. ಆದಾಗ್ಯೂ ಹರಿಣಿಯವರ ಮನೋಜ್ಞ ಅಭಿನಯ, ಸೃಷ್ಟಿಸಿದ ದಾಪುಗಾಲು, ದಿಟ್ಟತೆ ಚಿತ್ರಪ್ರೇಮಿಗಳ ಹೃದಯದಲ್ಲಿ ಜೀವಂತವಾಗಿದೆ. ಚಿತ್ರರಂಗದಲ್ಲಿ ಐತಿಹಾಸಿಕವಾಗಿ ಉಳಿದಿದೆ.

ಹರಿಣಿ ಏಕೆ ಇನ್ನೂ ನೆನಪಿನಂಗಳದಲ್ಲಿ ಪ್ರತಿಧ್ವನಿಸುತ್ತಾರೆ?
ಕಡಲತಡಿಯ ನಗರಿ ಉಡುಪಿಯಿಂದ ದೇಶದಾದ್ಯಂತ ಅಸಂಖ್ಯ ಮನಗಳಲ್ಲಿ ಮೆರೆದಾಡಿದ ಹರಿಣಿ ಇನ್ನೂ ಕೂಡ ನಮ್ಮ ನೆನಪಿನ ಅಂಗಳದಲ್ಲಿ ಪ್ರತಿಧ್ವನಿಸುತ್ತಿದ್ದಾರೆ. ಹರಿಣಿಯ ಅದ್ಭುತ ಅಭಿನಯಕ್ಕೆ ತಲೆದೂಗಿಸಿದ ಚಿತ್ರಪ್ರೇಮಿಗಳು ಹರಿಣಿಯ ದಿಟ್ಟತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಯುಗದಲ್ಲಿ ನಾಯಕಿ ಆಗುವುದರ ಅರ್ಥವನ್ನು ಮರು ವ್ಯಾಖ್ಯಾನಿಸಿದ ಹೆಗ್ಗಳಿಕೆ ಹರಿಣಿಯದ್ದು. ಸಾಮಾಜಿಕ ಮತ್ತು ಸಿನಿಮೀಯ ರೂಢಿಗಳು ಸಂಪ್ರದಾಯವಾದಿಗಳಾಗಿದ್ದ ಸಮಯದಲ್ಲಿ, ಅವರು ಸಂಪ್ರದಾಯವನ್ನೇ ಪ್ರಶ್ನಿಸುವ ಆಯ್ಕೆಗಳನ್ನು ಮಾಡಿದರು, ತಮ್ಮ ಕಲೆಯ ಪರವಾಗಿ ನಿಂತರು. ತಾನು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಘನತೆಯನ್ನು ತಂದರು. ಸಾಮಾನ್ಯ ಬಾಲ ಕಲಾವಿದೆಯಿಂದ ಪ್ರಸಿದ್ಧ ನಟಿ ಮತ್ತು ನಿರ್ಮಾಪಕಿಯಾದ ಅವರ ಬದುಕಿನ ಪಯಣ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿ ನಿಲ್ಲುತ್ತದೆ. ಇದೇ ಕಾರಣಕ್ಕೇನೋ ಉಡುಪಿಯ ಕುವರಿ ಹರಿಣಿ, ಇಂದಿನ ಹಿರಿಯ ನಟಿ ನೆನಪಿನಂಗಳದಲ್ಲಿ ಇನ್ನೂ ಕೂಡ ಪ್ರತಿಧ್ವನಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *