ಕನ್ನಡ ಚಿತ್ರರಂಗದ ಹಿರಿಯ ನಟ, ಛಲಭರಿತ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಎಂ.ಎಸ್ ಉಮೇಶ್ (80) ಇಂದು ಬೆಂಗಳೂರಿನಲ್ಲಿ ನಿಧನರಾದರು. ಕಳೆದ ಕೆಲವು ತಿಂಗಳಿನಿಂದ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.
ಸುಮಾರು ಆರು ದಶಕಗಳ ಕಾಲ ಕನ್ನಡ ಸಿನಿ ಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿದ ಉಮೇಶ ರವರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ವಿಶಿಷ್ಟ ಹಾಸ್ಯಪ್ರತಿಭೆ, ನೈಸರ್ಗಿಕ ಅಭಿನಯ ಮತ್ತು ಸೊಗಸಾದ ಸಂಭಾಷಣಾ ಶೈಲಿಯಿಂದ ರಂಗಭೂಮಿಯಿಂದ ಪರದೆಯ ತನಕ ಎಲ್ಲೆಡೆ ಪ್ರೇಕ್ಷಕರ ಮನಗೆದ್ದಿದ್ದರು.
ವೈದ್ಯಕೀಯ ಚಿಕಿತ್ಸೆ ನಡುವೆ ನಿಧನ:
ಅಕ್ಟೋಬರ್ ತಿಂಗಳಲ್ಲಿ ಮನೆಯಲ್ಲಿಯೇ ಜಾರಿ ಬಿದ್ದು ಗಾಯಗೊಂಡಿದ್ದ ಉಮೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಗಳ ಬಳಿಕ ಅವರಿಗೆ ಸ್ಟೇಜ್–4 ಲಿವರ್ ಕ್ಯಾನ್ಸರ್ ಇರುವುದಾಗಿ ವೈದ್ಯರು ದೃಢಪಡಿಸಿದ್ದರು. ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆ ನೀಡದ ಕಾರಣ, ಕಳೆದ ಕೆಲವು ವಾರಗಳಿಂದ ಅವರ ಆರೋಗ್ಯ ಹದಗೆಡುತ್ತಲೇ ಬಂದಿದೆ. ಇಂದು ಬೆಳಗ್ಗೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿಯೇ ಅವರು ನಿಧನರಾದರು.
ಸಿನಿಮೋದ್ಯಮಕ್ಕೆ ನೀಡಿದ ಅಪಾರ ಕೊಡುಗೆ:
ಉಮೇಶ್ ಅವರ ನಟನ ಜೀವನದಲ್ಲಿ ಗೋಲ್ಮಾಲ್ ರಾಧಾಕೃಷ್ಣ, ಕಥಾ ಸಂಗಮ, ನಾಗರಹೊಳೆ, ಗುರು ಶಿಷ್ಯರು, ಅಪೂರ್ವ ಸಂಗಮ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಾಸ್ಯ ಮತ್ತು ಭಾವನಾತ್ಮಕ ಪಾತ್ರಗಳನ್ನು ಒಂದೇ ತರದ ನೈಜತೆಯಿಂದ ನಿರ್ವಹಿಸಿದ ನಟನಾಗಿ ಅವರು ಸದಾ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತಾರೆ.
ಚಿತ್ರರಂಗದ ತಲೆಮಾರುಗಳು ಬದಲಾಗುತ್ತಿದ್ದರೂ, ಹಾಸ್ಯಕ್ಕೆ ಜೀವ ತುಂಬುವ ಅವರ ಅಭಿನಯ ಶೈಲಿ ಹೋಲಿಕೆ ಮಾಡಲು ಅಸಾಮಾನ್ಯವಾದುದು. ಹಲವಾರು ಚಿತ್ರಗಳಲ್ಲಿ ಅವರ ಪಾತ್ರಗಳು ನಕ್ಕು ನಗಿಸಿವೆ, ಮನರಂಜಿಸಿವೆ.
ಹಿರಿಯ ನಟ M.S. ಉಮೇಶ್ ಅವರ ಅಗಲಿಕೆಯಿಂದ ಸ್ಯಾಂಡಲ್ವುಡ್ ಅಪಾರ ಪ್ರತಿಭಾಶಾಲಿ ಕಲಾವಿದನನ್ನು ಕಳೆದುಕೊಂಡಿದೆ. ಅವರ ಹಾಸ್ಯ, ಅಭಿನಯ ಮತ್ತು ವ್ಯಕ್ತಿತ್ವ ಪ್ರೇಕ್ಷಕರ ಮನದಲ್ಲಿ ಸದಾ ಜೀವಂತವಾಗಿಯೇ ಉಳಿಯಲಿದೆ.
ಚಿತ್ರರಂಗದಲ್ಲಿ ಶೋಕದ ಅಲೆ:
ಉಮೇಶ್ ಅವರ ನಿಧನದ ಸುದ್ದಿ ತಲುಪುತ್ತಿದ್ದಂತೆಯೇ ಕನ್ನಡ ಚಿತ್ರರಂಗದ ನಟರು, ತಂತ್ರಜ್ಞರು, ರಾಜಕೀಯ ನಾಯಕರು ಮತ್ತು ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಿನಿಮಾ ಪಯಣ, ಹಾಸ್ಯಪಾತ್ರಗಳು ಮತ್ತು ವೈಯಕ್ತಿಕ ಸರಳ ಜೀವನದ ನೆನಪುಗಳನ್ನು ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಅವರ ಚಲನಚಿತ್ರ ಬದುಕನ್ನು ನೆನಪಿಸಿಕೊಂಡಿದ್ದಾರೆ.
ಪ್ರಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಎಂ.ಎಸ್. ಉಮೇಶ್ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ತಮ್ಮ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ಉಮೇಶ್ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಟರು.
'ಗುರು ಶಿಷ್ಯರು', 'ಹಾಲು ಜೇನು', 'ಅಪೂರ್ವ ಸಂಗಮ' ಸೇರಿ ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ… pic.twitter.com/107LHCGy0I
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 30, 2025 ಕನ್ನಡ ಸಿನಿಲೋಕದ ಹಾಸ್ಯ ಕಲಾವಿದ ಎಂ.ಎಸ್. ಉಮೇಶ್ ರವರ ಅಗಲಿಕೆ ನೋವು ತಂದಿದೆ.
ವಿಶಿಷ್ಟ ಹಾಸ್ಯ & ಸಂಭಾಷಣಾ ಶೈಲಿಯಿಂದ ಕನ್ನಡ ಚಿತ್ರರಂಗದಲ್ಲಿ ಜನಮನ್ನಣೆ ಗಳಿಸಿದ್ದ, ಶ್ರೀ ಉಮೇಶ್ ರವರ ಆತ್ಮಕ್ಕೆ ಸದ್ಗತಿ ಕೋರುತ್ತ, ಅವರ ಕುಟುಂಬ ವರ್ಗಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏 pic.twitter.com/oRolAPPc7c
— Tejasvi Surya (@Tejasvi_Surya) November 30, 2025 ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟರಾದ ಎಂ.ಎಸ್ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ.
350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಉಮೇಶ್ ಅವರು ಕನ್ನಡ ಚಿತ್ರರಂಗಕ್ಕೆ ಅತಿದೊಡ್ಡ ಕೊಡುಗೆ ನೀಡಿದ್ದರು. ನಾಗರ ಹೊಳೆ, ಗುರು ಶಿಷ್ಯರು, ಅನುಪಮಾ, ಕಾಮನಬಿಲ್ಲು, ಅಪೂರ್ವ ಸಂಗಮ, ಶ್ರುತಿ ಸೇರಿದಾಗ, ಹಾಲು ಸಕ್ಕರೆ, ಗೋಲ್ಮಾಲ್ ರಾಧಾಕೃಷ್ಣ… pic.twitter.com/6Z2XtBaKXj
— DK Shivakumar (@DKShivakumar) November 30, 2025


