ಮಣಿಪಾಲ, ಸೆ.29: ವಿಶ್ವ ಹೃದಯ ದಿನದ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನೆಲ ಮಹಡಿಯ ಒಪಿಡಿ ಲಾಂಜ್ನಲ್ಲಿ ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ 3ಡಿ ಶಿಲ್ಪವನ್ನು ಮಂಗಳವಾರ ಅನಾವರಣಗೊಳಿಸಲಾಯಿತು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಶಿಲ್ಪವನ್ನು ಅನಾವರಣಗೊಳಿಸಿದರು. ಮಾಹೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗ ಹಾಗೂ ಕಾರ್ಡಿಯೋ ವ್ಯಾಸ್ಕುಲರ್ ಮತ್ತು ಥೊರಾಸಿಕ್ ಸರ್ಜರಿ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘Don’t Miss A Beat’ (ಹೃದಯದ ಒಂದು ಬಡಿತವನ್ನೂ ನಿರ್ಲಕ್ಷಿಸಬೇಡಿ) ಎಂಬುದು ಈ ವರ್ಷದ ವಿಶ್ವ ಹೃದಯ ದಿನದ ಸಂದೇಶವಾಗಿದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಶ್ರೀನಾಥ್ ಮಣಿಪಾಲ್ ಅವರು ಈ 3ಡಿ ಶಿಲ್ಪವನ್ನು ರೂಪಿಸಿದ್ದಾರೆ.
ಆಸ್ಪತ್ರೆಯ ಜನನಿಬಿಡ ಒಪಿಡಿ ಲಾಂಜ್ನಲ್ಲಿ ಶಿಲ್ಪವನ್ನು ಸ್ಥಾಪಿಸಲಾಗಿದ್ದು, ರೋಗಿಗಳು, ಆರೈಕೆದಾರರು ಹಾಗೂ ಸಾರ್ವಜನಿಕರಲ್ಲಿ ಹೃದಯದ ಆರೈಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅವಿನಾಶ್ ಶೆಟ್ಟಿ, ಹೃದ್ರೋಗವು ಭಾರತದಲ್ಲಿ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ಹಾಗೂ ಸಕಾಲಿಕ ಚಿಕಿತ್ಸೆಯ ಮೂಲಕ ಹಲವು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದರು.
ಎದೆನೋವು ಅಥವಾ ಅಸ್ವಸ್ಥತೆ, ಉಸಿರಾಟದ ತೊಂದರೆ ಹಾಗೂ ಅಸಹಜ ಆಯಾಸದಂತಹ ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಆರೋಗ್ಯಕರ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆ, ತಂಬಾಕು ಸೇವನೆಯಿಂದ ದೂರವಿರುವುದು ಹಾಗೂ ಸಕಾಲಿಕ ಆರೋಗ್ಯ ತಪಾಸಣೆ ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಗಣೇಶ್ ಪರಮಶಿವಮ್, ಕಾರ್ಡಿಯೋ ವ್ಯಾಸ್ಕುಲರ್ ಮತ್ತು ಥೊರಾಸಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಗಣೇಶ್ ಕಾಮತ್ ಸೇವಗೂರ್, ಪ್ರಾಧ್ಯಾಪಕ ಡಾ. ಟಾಮ್ ದೇವಾಸಿಯಾ ಸೇರಿದಂತೆ ವೈದ್ಯರು, ಬೋಧಕ ಸಿಬ್ಬಂದಿ, ಶುಶ್ರೂಷಾ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

