ಉಡುಪಿ ಜಿಲ್ಲೆಯಿಂದ ಪ್ರವಾಸಕ್ಕಾಗಿ ಉತ್ತರ ಭಾರತದತ್ತ ತೆರಳಿದ್ದ ಕಾಪು ಮೂಲದ ಕುಟುಂಬವೊಂದು ದುರ್ಘಟನೆಯೊಳಗಾಗಿ ತಾಯಿ ಹಾಗೂ ಎಂಟು ತಿಂಗಳ ಮಗು ಜೀವ ಕಳೆದುಕೊಂಡ ಘಟನೆ ಚಂಡೀಘಡ ಸಮೀಪ ವರದಿಯಾಗಿದೆ.
ಲಭ್ಯ ಮಾಹಿತಿಯ ಪ್ರಕಾರ, ನವೆಂಬರ್ 30ರಂದು ಉಡುಪಿ ಮತ್ತು ಕಾಪುವಿನಿಂದ ಹೊರಟ ಎರಡು ಕುಟುಂಬಗಳು ವಿಮಾನದ ಮೂಲಕ ದೆಹಲಿಗೆ ತೆರಳಿ, ಅಲ್ಲಿಂದ ಚಂಡೀಘಡ ಮಾರ್ಗವಾಗಿ ಮನಾಲಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದವು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಕಾರಿನ ಎಡಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಸಂಜನಾ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮಗು ಅಪಘಾತದ ಎರಡು ದಿನಗಳ ಬಳಿಕ ಮೃತಪಟ್ಟಿತು. ತಲೆಗೆ ಗಂಭೀರ ಗಾಯಗೊಂಡಿದ್ದ ಸಂಜನಾ ಅವರು ಕೋಮಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಚಿಕಿತ್ಸೆ ಫಲಿಸದೆ ಡಿಸೆಂಬರ್ 10ರಂದು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಮಗುವಿನ ಮೃತದೇಹವನ್ನು ಡಿಸೆಂಬರ್ 4ರಂದು ಕಾಪು ಸಮೀಪದ ಕೈಪುಂಜಾಲಿಗೆ ತರಲಾಗಿದ್ದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸಂಜನಾ ಅವರ ಮೃತದೇಹವೂ ಒಂದೆರಡು ದಿನಗಳಲ್ಲಿ ಕೈಪುಂಜಾಲಿಗೆ ಆಗಮಿಸುವ ಸಾಧ್ಯತೆ ಇದೆ.
ಸಂಭ್ರಮದಿಂದ ಪ್ರವಾಸಕ್ಕೆ ಹೊರಟಿದ್ದ ಕುಟುಂಬದ ಮೇಲೆ ದುರ್ಘಟನೆ ಎರಗಿರುವುದು ಸಂಬಂಧಿಕರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟುಮಾಡಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, ಊರಿನಾದ್ಯಂತ ದುಃಖದ ಛಾಯೆ ಆವರಿಸಿದೆ.


