ಬೈಂದೂರು: ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಎಂಬ ಸರ್ಕಾರದ ತತ್ವದಡಿ ಯಾವುದೇ ಸರ್ಕಾರಿ ಮೆಡಿಕಲ್ ಕಾಲೇಜ್ ಇಲ್ಲದ ಮತ್ತು ಕಾಲೇಜು ಸ್ಥಾಪನೆಗೆ ಪೂರಕ ವಾತಾವರಣವಿರುವ ಉಡುಪಿ ಜಿಲ್ಲೆಯ ಕುಂದಾಪುರ ಬೈಂದೂರು ಭಾಗದಲ್ಲಿ ಹೊಸದಾಗಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಮುಂದಿನ ಬಜೆಟ್ ನಲ್ಲಿ ಅನುದಾನ ಕಾಯ್ದಿರಿಸುವಂತೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಆಗ್ರಹ ವ್ಯಕ್ತವಾಗಿದೆ.

ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಉಡುಪಿ ಜಿಲ್ಲೆಯ ಬೈಂದೂರು ಭಾಗದಲ್ಲಿ ಬಡ ಜನರ ಆರೋಗ್ಯ ಸುಧಾರಣೆಯ ಹಿತದೃಷ್ಟಿಯಿಂದ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಸರಕಾರವು ಮೆಡಿಕಲ್ ಕಾಲೇಜು ಸ್ಥಾಪನೆಗೆ ಒಂದೊಂದೇ ಹೆಜ್ಜೆ ಮುಂಡಿದಿಡುತ್ತಿದ್ದಂತೆ ಇತ್ತ ಕುಂದಾಪುರದ ಬೈಂದೂರು ಭಾಗದ ಮೆಡಿಕಲ್ ಕಾಲೇಜು ಬೇಡಿಕೆ ಧ್ವನಿ ಕ್ಷೀಣವಾಗುತ್ತಿರುವುದು ಸಾರ್ವಜನಿಕರಿಗೆ ಬೇಸರ ಮೂಡಿಸಿದೆ. ಪುತ್ತೂರು ಶಾಸಕರ ಬೇಡಿಕೆಯ ಒತ್ತಡದಂತೆ ಸರಕಾರ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜನ್ನು ಪುತ್ತೋರಿಗೆ ಘೋಷಿಸಿತ್ತು. ಈ ಹಿಂದೆಯೇ ಪಶು ವೈದ್ಯಕೀಯ ಕಾಲೇಜನ್ನೂ ಪುತ್ತೋರಿಗೆ ಘೋಷಿಸಲಾಗಿದ್ದು, ಅದಿನ್ನೂ ಪೂರ್ಣ ಅನುಷ್ಠಾನವಾಗುವ ಮೊದಲೇ ಮೆಡಿಕಲ್ ಕಾಲೇಜಿಗೆ ೧೦೦ ಹಾಸಿಗೆಯುಳ್ಳ ಆಸ್ಪತ್ರೆಗೂ ಕೂಡ ಅನುದಾನ ಗಿಟ್ಟಿಸಿಕೊಳ್ಳಲಾಗಿದೆ.
ಕುಂದಾಪುರದಲ್ಲಿ ಸುಸ್ಸಜ್ಜಿತ ಸರಕಾರೀ ಆಸ್ಪತ್ರೆ ಇದೆ, ತಾಯಿ ಮಕ್ಕಳ ಆಸ್ಪತ್ರೆ ಇದೆ. ವೈದ್ಯಕೀಯ ವ್ಯವಸ್ಥೆ ಚೆನ್ನಾಗಿದ್ದು ಅತೀ ಹೆಚ್ಚು ಹೆರಿಗೆ ಆಗುವ ಆಸ್ಪತ್ರೆ ಎಂದು ಗುರುತಿಸಿಕೊಂಡಿದೆ. ಆದುದರಿಂದ ಕುಂದಾಪುರ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಮಾಡಿದರೆ ಸರಕಾರಕ್ಕೆ ಸುಲಭವಾಗಲಿದೆ. ಈಗಾಗಲೇ ಬೈಂದೂರು, ಹೆಬ್ರಿ, ಭಟ್ಕಳ, ಶಿರೂರು ಮುಂತಾದ ಸ್ಥಳಗಳಿಂದ ಕುಂದಾಪುರ ಸರಕಾರೀ ಆಸ್ಪತ್ರೆಗೆ ರೋಗಿಗಳು ಆಗಮಿಸುತ್ತಿದ್ದಾರೆ. ಜೊತೆಗೆ ಉತ್ತರ ಕನ್ನಡದಿಂದಲೂ ಇಲ್ಲಿಗೆ ರೋಗಿಗಳು ಬರುತ್ತಿದ್ದಾರೆ.
ಕುಂದಾಪುರ ಜಿಲ್ಲಾ ಉಪ ವಿಭಾಗ ಕೇಂದ್ರವಾಗಿರುವ ಕಾರಣ ಪುತ್ತೂರಿಗೆ ಮಂಜೂರು ಆಗುವಂತೆ ಇಲ್ಲಿಗೂ ಮೆಡಿಕಲ್ ಕಾಲೇಜು ಬರಲಿ ಎಂಬ ಬೇಡಿಕೆ ನ್ಯಾಯಸಮ್ಮತವಾಗಿದೆ. ಕುಂದಾಪುರದಲ್ಲಿ ಸುಸಜ್ಜಿತ ಆಸ್ಪತ್ರೆ ಇರುವ ಕಾರಣ, ಬೈಂದೂರಿನಲ್ಲಿ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆ ಇದೆ. ಆದುದರಿಂದ ಜಿಲ್ಲೆಯ ಬಡ ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಎಂಬ ಸರಕಾರದ ನೀತಿಯಂತೆ, ಯಾವುದೇ ಸರಕಾರೀ ಮೆಡಿಕಲ್ ಕಾಲೇಜು ಹೊಂದಿಲ್ಲದ ಉಡುಪಿ ಜಿಲ್ಲೆಯ ಕುಂದಾಪುರದ ಬೈಂದೂರು ಭಾಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಅನುದಾನ ಕಾಯ್ದಿರಿಸಬೇಕಾಗಿ ವೈದ್ಯಕೀಯ ಶಿಕ್ಷಣ ಮಂತ್ರಿಗಳನ್ನು ಆಗ್ರಹಿಸಲಾಯಿತು


