ಕರ್ನಾಟಕದ ಹಳ್ಳಿ ಹುಡುಗಿ ಕ್ರಿಕೆಟ್ ನ ವಿಶ್ವಕಿರೀಟ ಗೆದ್ದ ರೋಚಕ ಕಥೆ

ಅಂಧ ಮಹಿಳಾ ಕ್ರಿಕೆಟ್ನ ನಾಯಕಿ ದೀಪಿಕಾ ಟಿ.ಸಿ ಯ ಯಶೋಗಾಥೆ

admin

ಕರ್ನಾಟಕದ ಗಡಿ ಭಾಗದ ಒಂದು ಪುತಾ ಹಳ್ಳಿಯಲ್ಲಿ, ಸಂಸ್ಕಾರಯುತ ಬಡ ಕುಟುಂಬದಲ್ಲಿ, ಕಷ್ಟ ನೋವುಗಳ ಸಹಿಸಿದ ಬಾಲ್ಯದಲ್ಲಿ, ದುರಂತದಿಂದ ಕಳೆದುಕೊಂಡ ಬೆಳಕಿನಲ್ಲಿ.. ಮತ್ತೊಂದು ದಿನ ಮುಡಿಗೇರಿಸಿಕೊಂಡ ವಿಶ್ವ ಕಿರೀಟದಲ್ಲಿ, ಅವಳು ಇಂದು ಮೆರೆಯುತ್ತಿದ್ದಾಳೆ. ಇಡೀ ವಿಶ್ವವನ್ನೇ ಗೆದ್ದು ಬಿಟ್ಟಿದ್ದಾಳೆ. ಕೋಟಿಗಟ್ಟಲೆ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಸ್ಫೂರ್ತಿ ತುಂಬಿದ್ದಾಳೆ. ದೀಪಿಕಾ, ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ, ಕ್ರಿಕೆಟ್ ವಿಶ್ವಕಪ್ ಗೆದ್ದ ಚಾಂಪಿಯನ್ ಹುಡುಗಿಯ ರೋಚಕ ಯಶೋಗಾಥೆ ನಿಮ್ಮ ಮುಂದೆ.

ಸಂಕಷ್ಟದ ಮಧ್ಯೆ ಆರಂಭವಾದ ಹೋರಾಟ:
ಕರ್ನಾಟಕದ ತುಮಕೂರು ಜಿಲ್ಲೆಯ ಸರಳ ಕೃಷಿಕ ಕುಟುಂಬದಲ್ಲಿ ಹುಟ್ಟಿದ ದೀಪಿಕಾ ಟಿ.ಸಿ, ಇಂದು ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಎಂಬ ಸ್ಥಾನಕ್ಕೆ ಏರಿರುವುದು ಒಂದು ನಿರಂತರ ಪರಿಶ್ರಮದ ಅನನ್ಯ ಉದಾಹರಣೆ. ಬಾಲ್ಯದಲ್ಲಿದ್ದಾಗ ನಡೆದ ಅಪಘಾತದಲ್ಲಿ ದೃಷ್ಟಿ ಕಳೆದುಕೊಂಡರೂ, ಅವರ ಜೀವನದ ಹಾದಿಯಲ್ಲಿ “ಹಿಂತಿರುಗುವೆ” ಎಂಬ ಪದವೇ ಇರಲಿಲ್ಲ. ತಂದೆ-ತಾಯಿ ಕೂಲಿ ಕಾರ್ಮಿಕರು. ಬದುಕನ್ನು ಸಾಗಿಸಲು ಹೋರಾಟ ಮಾಡುತ್ತಿದ್ದ ಕುಟುಂಬದಲ್ಲಿ ಬೆಳೆದ ದೀಪಿಕಾ ಸಾಮಾನ್ಯ ಶಾಲೆಯಲ್ಲಿ ನಾಲ್ಕನೇ ತರಗತಿ ತನಕ ಓದಿ, ನಂತರ ಕುನಿಗಲ್‌ನ ದೃಷ್ಟಿದೋಷಿತ ಮಕ್ಕಳ ಶಾಲೆಗೆ, ನಂತರ ರಂಗರಾವ್ ಮೆಮೊರಿಯಲ್ ಶಾಲೆಗೆ ಸೇರಿದರು. ಪ್ರಸ್ತುತ ಅವರು ವಿಜಯನಗರದ ಸರ್ಕಾರಿ ಕಾಲೇಜಿನಲ್ಲಿ ಬಿ.ಎ ಅಂತಿಮ ವರ್ಷ ಅಭ್ಯಾಸ ಮಾಡುತ್ತಿದ್ದಾರೆ. ಸಮರ್ಥನಂ ಟ್ರಸ್ಟ್ ಅವರ ಶಿಕ್ಷಣಕ್ಕೆ ಬೆಂಬಲ ನೀಡುತ್ತಿದೆ.

ರಾಜ್ಯದಿಂದ ರಾಷ್ಟ್ರ ಮಟ್ಟದ ನಾಯಕತ್ವದವರೆಗೆ
ಶಾಲಾ ದಿನಗಳಲ್ಲೇ ಅಂಧ ಕ್ರಿಕೆಟ್ ಗೆ ಪರಿಚಿತಳಾದ ದೀಪಿಕಾ, 2019ರಲ್ಲಿ ಕರ್ನಾಟಕ ತಂಡದ ಪರವಾಗಿ ಆಡಲು ಆಯ್ಕೆಯಾದರು. B3 ವರ್ಗದ ಆಟಗಾರ್ತಿಯಾಗಿ ಅವರ ಕ್ಷಮತೆ ಮತ್ತು ಸ್ಪಷ್ಟ ಆಟ ಗಮನ ಸೆಳೆದಿತ್ತು. ಕರ್ನಾಟಕ ತಂಡದಲ್ಲಿ ತಕ್ಷಣವೇ ಉತ್ತಮ ಪ್ರದರ್ಶನ ನೀಡಿ, ನಂತರ ರಾಷ್ಟ್ರೀಯ ಮಹಿಳಾ ಅಂಧ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. 2023ರಲ್ಲಿ ನೇಪಾಳದಲ್ಲಿ ನಡೆದ ಮಹಿಳಾ ಅಂಧ ಕ್ರಿಕೆಟ್ ದ್ವಿಪಕ್ಷೀಯ ಸರಣಿಯಲ್ಲೂ ಅವರು ಮಹತ್ವದ ಪಾತ್ರ ವಹಿಸಿದರು. ನಾಯಕತ್ವ, ಕ್ಷಮತೆ ಮತ್ತು ಧೈರ್ಯ — ಇವುಗಳ ಸಮನ್ವಯದ ಅದ್ಭುತ ನಿದರ್ಶನವಾಗಿದ್ದ ದೀಪಿಕಾ ಟಿ.ಸಿ ಅವರನ್ನು ಭಾರತೀಯ ಮಹಿಳಾ ಅಂಧ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಯಿತು.

ದೀಪಿಕಾ ನಾಯಕತ್ವದಲ್ಲಿ ಸೃಷ್ಟಿಯಾದ ಇತಿಹಾಸ:
2025ರ ನವೆಂಬರ್ ತಿಂಗಳು ಭಾರತೀಯ ಅಂಧ ಮಹಿಳಾ ಕ್ರಿಕೆಟ್‌ಗೆ ಐತಿಹಾಸಿಕ ಕ್ಷಣ. ಭಾರತ ಮತ್ತು ಶ್ರೀಲಂಕಾ ಸಂಯುಕ್ತ ಆತಿಥ್ಯದಲ್ಲಿ ನಡೆದ ಪ್ರಥಮ ಮಹಿಳಾ ಟಿ*೨೦ ಅಂಧ ಕ್ರಿಕೆಟ್ ವಿಶ್ವಕಪ್ ನಲ್ಲಿ, ದೀಪಿಕಾ ನಾಯಕತ್ವದ “ಟೀಮ್ ಇಂಡಿಯಾ” ಪ್ರಾಬಲ್ಯ ತೋರಿತು.ಕೊಲಂಬೋದಲ್ಲಿ ನಡೆದ ಫೈನಲ್‌ನಲ್ಲಿ ಭಾರತ ನೇಪಾಳ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ವಿಶ್ವಕಪ್ ಗೆದ್ದಿತು. ನೇಪಾಳವನ್ನು 114/5 ರನ್‌ಗಳಿಗೆ ಕಟ್ಟಿಹಾಕಿ, ಭಾರತ 12.1 ಓವರ್‌ಗಳಲ್ಲಿ ಗುರಿಯನ್ನು ನೆರವೇರಿಸಿತು. ಅಂದು ಇಡೀ ಭಾರತ ದೀಪಿಕಾಳ ಕಾರ್ಯಕ್ಷಮತೆಯನ್ನು, ತಂಡದ ಪ್ರತಿಯೊಬ್ಬರ ಸಾಧನೆಯನ್ನು ಮುಕ್ತ ಕಂಠದಿಂದ ಹೊಗಳಿತು. ಆ ದಿನದ ಬಳಿಕ ದೀಪಿಕಾ ಕೋಟಿಗಟ್ಟಲೆ ಕ್ರಿಕೆಟ್ ಪ್ರೇಮಿಗಳ ಹೃದ್ಯದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾಳೆ. ಅಸಲಿಗೆ ಅವಳ ದೃಢ ಸಂಕಲ್ಪದಿಂದ ತುಂಬಿದ ಸಾಧನೆ ಪ್ರತಿ ಮನದಲ್ಲಿ ವಿರಾಜಮಾನವಾಗಿದೆ.

ಊರಲ್ಲಿ ಎಲ್ಲರೂ ಹೇಳುತ್ತಿದ್ದರು. ನೀನು ಕಣ್ಣು ಕಾಣದವಳು. ನೀನು ಏನು ಮಾಡಬಲ್ಲೆ. ಇವತ್ತು ನಾವು ತೋರಿಸಿ ಬಿತ್ತೇವೆ, ನಾವು ಏನೆಲ್ಲಾ ಮಾಡಬಹುದು ಎಂದು. ನಮ್ಮ ಹೆಣ್ಣುಮಕ್ಕಳು ಅತ್ಯುತ್ತಮವಾಗಿ ಆಡಿದ್ದಾರೆ. ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಪ್ರಧಾನಿ ಮೋದಿಜಿಯವರ ಅಭಿನಂದನೆ ನಮಗೆ ದೊಡ್ಡ ಪ್ರೇರಣೆ. ಕರ್ನಾಟಕ ಸರಕಾರದ ಬೆಂಬಲ ಸದಾ ನೆನಪಿನಲ್ಲಿರುವುದು.
– ಗೆಲುವಿನ ನಂತರ ದೀಪಿಕಾ ಭಾವುಕ ಮಾತು:

ಗೌರವ, ಸನ್ಮಾನ ಮತ್ತು ಭವಿಷ್ಯ:
ಟೂರ್ನಿಯ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ತಂಡವನ್ನು ಭೇಟಿಯಾಗಿ “ದೃಢ ಸಂಕಲ್ಪದ ಅದ್ಭುತ ಉದಾಹರಣೆ” ಎಂದು ಕೊಂಡಾಡಿದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲೂ ತಂಡಕ್ಕೆ ವಿಶಿಷ್ಟ ಗೌರವ ಲಭಿಸಿತು. ಕರ್ನಾಟಕ ಸರ್ಕಾರವು ತಂಡದ ಸದಸ್ಯರಿಗೆ ಉದ್ಯೋಗ ಮತ್ತು ಹಣಕಾಸು ನೆರವು ನೀಡುವುದಾಗಿ ಭರವಸೆ ನೀಡಿದೆ.

ಗ್ರಾಮಾಂತರ ಕರ್ನಾಟಕದ ಮಣ್ಣಿನಿಂದ ಪ್ರಾರಂಭವಾದ ಈ ಪಯಣ, ಇಂದು ವಿಶ್ವಕಪ್ ಟ್ರೋಫಿ ಹಿಡಿದ ನಾಯಕಿಯಾಗಿ ನಿಂತಿರುವ ದೀಪಿಕಾ ಟಿ.ಸಿ ಅವರನ್ನು “ಸ್ಪೂರ್ತಿಯ ಜೀವಂತ ರೂಪ” ಎಂದರೆ ತಪ್ಪಾಗಲಾರದು.

Share This Article
Leave a Comment

Leave a Reply

Your email address will not be published. Required fields are marked *